ಚಿತ್ರದುರ್ಗ. ಮಾ.30: ನಿಯಮಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಚಿತ್ರದುರ್ಗ ನಗರ ಜೆ.ಸಿ.ಆರ್. ಬಡಾವಣೆಯ ಕಾರ್ತಿಕ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ವಿರುದ್ದ ಅಬಕಾರಿ ಕಾಯ್ದೆ ಹಾಗೂ ನಿಯಮಗಳ ಅನುಸಾರ ಪ್ರಕರಣ ದಾಖಲು ಮಾಡಲಾಗಿದೆ.
ಶುಕ್ರವಾರ ಸಂಜೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ನಗರದ ಗಾಂಧಿ ವೃತ್ತ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳ ಬಾರ್, ಎಂ.ಎಸ್.ಐ.ಎಲ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್‍ಗಳ ಮೇಲೆ ಅನಿರೀಕ್ಷತ ಭೇಟಿ ನೀಡಿ ತಪಾಸಣೆ ನಡೆಸಿದರು.
ಈ ವೇಳೆ ಕಾರ್ತಿಕ್ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ, ಲಾಡ್ಜ್‍ನಲ್ಲಿ ತಂಗಿರುವ ಗ್ರಾಹಕರನ್ನು ಹೊರತು ಪಡಿಸಿ, ಹೊರಗಿನ ಗ್ರಾಹಕರಿಗೂ ಮದ್ಯ ಸರಬಾರಾಜು ಮಾಡುವುದು ಕಂಡು ಬಂದಿತು. ಈ ಹಿನ್ನಲೆಯಲ್ಲಿ ಅಬಕಾರಿ ಕಾಯ್ದೆ 1965ರ 36 ಹಾಗೂ 45 ಕಲಂಗಳು ಹಾಗೂ ಅಬಕಾರಿ ನಿಯಮಗಳ ಕಲಂ 3(7)ಬಿ, ಅಬಕಾರಿ ಪರವಾನಿಗೆ ನಿಯಮದ ಕಲಂ 6 ಅಡಿ ಪ್ರಕರಣ ದಾಖಲಿಸಲಾಗಿದೆ.
ಅನಿರೀಕ್ಷತ ತಪಾಸಣೆ ವೇಳೆ ತಹಶೀಲ್ದಾರ್ ಡಾ.ನಾಗವೇಣಿ, ಅಬಕಾರಿ ನಿರೀಕ್ಷಕ ಶೇಕ್ ಇಮ್ರಾನ್, ಉಪತಹಶೀಲ್ದಾರ್ ನಾಗರಾಜ ಉಪಸ್ಥಿತರಿದ್ದರು.