ಚಿತ್ರದುರ್ಗ | ಶೌಚಾಲಯ ನಿರ್ಮಾಣದಲ್ಲಿ ಭಾರೀ ಅವ್ಯವಹಾರ ; ಜಿಲ್ಲಾ ಉಸ್ತುವಾರಿ ಸಚಿವರಿಂದ ತನಿಖೆ ಆದೇಶ

2 Min Read

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ,(ಏ.08) : ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸ್ಸಿನ ಯೋಜನೆಯಾದ ಗ್ರಾಮೀಣ ಭಾಗದ ಶೌಚಾಲಯ ನಿರ್ಮಾಣದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಒಂದು ವಾರದಲ್ಲಿ ಜಿಲ್ಲೆಯ 189 ಗ್ರಾಮ ಪಂಚಾಯತಿಗಳಲ್ಲಿ ತನಿಖೆ ನಡೆಸಿ ವರದಿ ನೀಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಪೊಲೀಸ್ ಕೇಸು ದಾಖಲಿಸುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ 189 ಗ್ರಾಮ ಪಂಚಾಯತಿಯಲ್ಲಿ ಶೌಚಾಲಯ ನಿರ್ಮಾಣ ಸಂಬಂಧ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ. ಒಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು. ಒಂದು ವೇಳೆ ಅಕ್ರಮ ಕಂಡುಬಂದರೆ ಎಲ್ಲಾ ಪಿಡಿಓ ಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಸೂಚನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸ್ಸು ಇದನ್ನು ಸರಿಯಾಗಿ ಮಾಡೊಲ್ಲ ಎಂದರೆ ಹೇಗೆ ?ಸರ್ಕಾರದ ಹಣ ಯಾರದೋ ಜೇಬಿಗೆ ಹೋಗುತ್ತೇ ಅಂದರೆ ನಿಮ್ಮಗಳ ಕಾರ್ಯವೈಖರಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಮಾತನಾಡಿ, ಬೆಳಗಟ್ಟ ಹಾಗೂ ಐನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣ ಸಂಬಂಧ ಫಲಾನುಭವಿಗಳನ್ನು ಹೊರತು ಪಡಿಸಿ ಬೇರೆ ವ್ಯಕ್ತಿಗಳಿಗೆ ಹಣ ಸಂದಾಯವಾಗಿದೆ. ಈ ಬಗ್ಗೆ ಪಿಡಿಓ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಅದೇ ರೀತಿ ತಾಲ್ಲೂಕು ಪಂಚಾಯಿತಿ ಇಓ ವಿರುದ್ದನೂ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಚಿತ್ರದುರ್ಗ ನಗರಸಭೆಯಲ್ಲಿ ಸದಸ್ಯೆ ಆಗಿರುವವರ ಹೆಸರಲ್ಲಿ ಹಣ ಬಿಡಿಸಲಾಗಿದೆ. ಎಂದರೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಆಡಳಿತ ಮಾಡುತ್ತಿದ್ದಾರೆ ನೋಡಿ ?
ನಗರಸಭೆಯಲ್ಲಿ ಸದಸ್ಯೆ ಆಗಿರುವಾಗ ಹಳ್ಳಿಯ ಮತಪಟ್ಟಿಯಲ್ಲಿ ಹೆಸರು ಇರಬಾರದು. ಈಬಗ್ಗೆ ಪರಿಶೀಲನೆ ಮಾಡದೆ ಹಣ ಹಾಕಿರುವುದನ್ನು ನೋಡಿದರೆ ಇದರಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಕಂಡುಬಂದಿದೆ ಆದ್ದರಿಂದ ಎಲ್ಲಾ ಪಂಚಾಯತಿಗಳ ತನಿಖೆ ನಡೆಸಿ ಎಂದು ಆಗ್ರಹಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಿದ್ದೆರಶ್ವರ ದುರ್ಗ ಗ್ರಾಮದಲ್ಲಿ ಸಾರ್ವಜನಿಕರ ವಿರೋಧ ಇದ್ದರು ಕೂಡ ಅಬಕಾರಿ ಇಲಾಖೆ ಅಧಿಕಾರಿ ಬಾರ್ ತೆರೆಯಲು  ಅನುಮತಿ ನೀಡಿದ್ದಾರೆ. ಇದು ಎಷ್ಟರ ಮಟ್ಟಗೆ ಸರಿ ? ಇದು ಜನ ವಿರೋಧಿ ಧೋರಣೆ ಎಂದು ಕಿಡಿಕಾರಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಬೇಡವಾದ ಊರಿಗೆ ಅದು ಖಾಸಗಿ ಬಾರ್ ಗಳಿಗೆ ಅಬಕಾರಿ ಅಧಿಕಾರಿಗಳು ಅನುಮತಿ ನೀಡುತ್ತಾರೆ. ಆದರೆ ಹೊಸದುರ್ಗ ತಾಲ್ಲೂಕಿನಲ್ಲಿ ಸರ್ಕಾರದ ಎಂಎಸ್‍ಐಎಲ್ ತೆರೆಯಲು ಅನುಮತಿ ಕೇಳಿ ಎರಡು ವರ್ಷ ಆದರೂ ಕೂಡ ಅಬಕಾರಿ ಅಧಿಕಾರಿ ಅನುಮತಿ ನೀಡುತ್ತಿಲ್ಲ. ಈ ಕೆಲಸ ಆಗದಿದ್ದರೆ ಮಾಡುವುದೇ ಬೇಡ ಎಂದು ಅಬಕಾರಿ ಅಧಿಕಾರಿಗೆ ಕೈಮುಗಿದು ಕೂರಪ್ಪ ನೀನು ದೊಡ್ಡವನು ಎಂದು ಬೇಸರ ವ್ಯಕ್ತಪಡಿಸಿದರು.

ಆಗ ಮಧ್ಯ ಪ್ರವೇಶಿದ ಸಚಿವ ಬಿ.ಸಿ.ಪಾಟೀಲ್ ಸಣ್ಣ ಸಣ್ಣ ವಿಷಯಗಳನ್ನು ಎರಡು ವರ್ಷಗಳ ಕಾಲ ಎಳೆಯುವುದೆಂದರೆ ಹೇಗೆ ಇದೇನಾ ನೀವು ಕೆಲಸ ಮಾಡುವುದು ? ಜಿಲ್ಲಾಧಿಕಾರಿಗಳು ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಎಂ.ಚಂದ್ರಪ್ಪ, ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಿಇಓ ನಂದೀನಿ ದೇವಿ, ಪೊಲೀಸ್ ಹೆಚ್ಚುವರಿ ಅಧೀಕ್ಷಕ ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *