ಚಿತ್ರದುರ್ಗ : ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ

6 Min Read

ಚಿತ್ರದುರ್ಗ. ಫೆ.13:   ನಗರದ ವಿ.ಪಿ. ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಇದೇ ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಹೆಣ್ಣಿಗೆ ಗೌರವ ಸೂಚಕ ಕಲಾಕೃತಿ, ಮಯೂರವರ್ಮ, ಸ್ವಾವಲಂಬಿ ರೈತ ಹಾಗೂ ವಾಣಿವಿಲಾಸ ಸಾಗರ ಕಲಾಕೃತಿ 32ನೇ ಫಲ-ಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷ ಆಕರ್ಷಣೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ ಹೇಳಿದರು.

ಜಿಲ್ಲಾ ಫಲ-ಪುಷ್ಪ ಪ್ರದರ್ಶನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಕುಬ್ಜ ಮರ (ಬೋನ್ಸಾಯ್) ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಬಿಸಿಲು ನಾಡಿನಲ್ಲಿ ಪುಷ್ಪಗಳ ಕಾರುಬಾರು: ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 50ಕ್ಕೂ ಹೆಚ್ಚು ಬಗೆಯ 50 ಸಾವಿರ ವಿವಿಧ ಜಾತಿಯ  ಹೂವಿನಗಿಡಗಳನ್ನು ಬೆಳೆಯಲಾಗಿದೆ.

ಆರ್ಕಿಡ್ಸ್, ಕಾಕ್ಸ್ ಕೂಂಬ್, ಸೆಲೋಶಿಯಾ, ಗಾಕ್ಸೀನಿಯ, ಕೆಲಂಚಾ, ಲಿಲ್ಲಿಸ್, ಇಂಪೇಷನ್ಸ್ (ಮಿಕ್ಸ್‍ಡ್), ಡಾಲಿಯಾ (ಡ್ವಾರ್ಫ್ ಮತ್ತು ಟಾಲ್) ಸಾಲ್ವಿಯಾ (ಕೆಂಪು, ನೀಲಿ, ಕೇಸರಿ,) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ (ಡ್ವಾರ್ಫ್ ಮತ್ತು ಟಾಲ್),  ಪೆಟೂನಿಯಾ (ಸಿಂಗಲ್ ಮತ್ತು ಡಬಲ್ ವರ್ಲ್), ಕಾಸ್‍ಮಾಸ್ ಮಿಕ್ಸ್ (ಡ್ವಾರ್ಫ್ ಮತ್ತು ಟಾಲ್), ಬಾಲ್ಸಂ, ಜಿರೇನಿಯಂ, ಆಂಟಿರಿನಮ್ ಮಿಕ್ಸ್ ಡಯಾಂತಸ್ ಮಿಕ್ಸ್, ಕ್ಯಾಲೊಂಡೋಲಾ, ಪಾಟ್ ಕ್ರೈಸಾಂತೆಮ್, ಪೆಂಟಾಸ್, ಯುಪೋರ್ಬಿಯ ಮಿಲ್ಲಿ, ಫಾಯಿನ್‍ಸಿಟಿಯಾ, ಬಿಗೋನಿಯಾ, ವಿಂಕಾ, ಇತ್ಯಾದಿ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡಲಿದೆ ಎಂದು ಹೇಳಿದರು.

ಹೆಣ್ಣಿಗೆ ಗೌರವಸೂಚಕ ಕಲಾಕೃತಿ: ನಾವು ನಮ್ಮ ನಿತ್ಯ ಜೀವನದಲ್ಲಿ ಹೆಣ್ಣಿಗೆ ಗೌರವಯುತ ಸ್ಥಾನ ನೀಡಿದ್ದು, ನಮ್ಮ ನಿಸರ್ಗವನ್ನು ಪ್ರಕೃತಿ ಮಾತೆ ಎಂದು, ಭೂಮಿಯನ್ನು ಭೂತಾಯಿ ಎಂದು, ಗಂಗೆಯನ್ನು ಗಂಗಾಮಾತೆ ಎಂದು, ನಮ್ಮ ದೇಶವನ್ನು ಭಾರತಮಾತೆ ಎಂದು ಹಾಗೂ ನಮ್ಮ ರಾಜ್ಯವನ್ನು ಕನ್ನಡದ ಭುವನೇಶ್ವರಿಯ ಸ್ವರೂಪದಲ್ಲಿ ಪೂಜಿಸುತ್ತಾ ಬಂದಿದ್ದೇವೆ. ನಮ್ಮ ಹುಟ್ಟಿನಿಂದ ಸಾವಿನವರೆಗೂ ಹೆಣ್ಣು ತಾಯಿಯಾಗಿ, ಸತಿಯಾಗಿ, ಸೋದರಿಯಾಗಿ, ಪುತ್ರಿಯಾಗಿ, ಸೊಸೆಯಾಗಿ ಹೀಗೆ ಸಂಸಾರದ ಕಡಲಿನಲ್ಲಿ ವಿವಿಧ ಸ್ವರೂಪಗಳಲ್ಲಿ ಸ್ಪಂದಿಸುತ್ತಾ ಬಂದಿದ್ದಾಳೆ.  ಹೆಣ್ಣಿಗೆ ಇಷ್ಟೆಲ್ಲಾ ಸ್ಥಾನಮಾನ ನೀಡಿದ್ದರೂ ಪ್ರಸ್ತುತ ಸಮಾಜದಲ್ಲಿ ಹೆಣ್ಣು ವಿವಿಧ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿರುವುದನ್ನು ನೋಡಬಹುದು. ಹೆಣ್ಣಿನ ಮೇಲಿನ ಅತ್ಯಾಚಾರ, ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಪೋಕ್ಸೋ ಪ್ರಕರಣಗಳು ಇತ್ಯಾದಿಯಾಗಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಈ ಎಲ್ಲಾ ವಿದ್ಯಮಾನ ಗಮನದಲ್ಲಿಟ್ಟುಕೊಂಡು ಹೆಣ್ಣನ್ನು ಕೇವಲ ಒಬ್ಬ ಹೆಣ್ಣಾಗಿ, ಅಬಲೆಯಾಗಿ ನೋಡದೆ, ಸಬಲೆಯಾಗಿ ನೋಡಲಿ ಎಂಬ ಮಹಾತ್ವಾಕಾಂಕ್ಷೆಯೊಂದಿಗೆ ಹಾಗೂ ಹೆಣ್ತನಕ್ಕೆ ಘಾಸಿಯಾಗದಂತೆ ಗೌರವಿಸೋಣ ಎಂಬ ಅರ್ಥದ ಕಲಾಕೃತಿ ಪ್ರದರ್ಶಿಸಲಾಗುವುದು ಎಂದರು.

ಮಯೂರವರ್ಮ: ಅ ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ಕನ್ನಡದ ಮೊದಲ ದೊರೆ ಮಯೂರವರ್ಮ ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಅನೇಕರಿಗೆ ಈ ಮಾಹಿತಿಯು ತಿಳಿದಿರುವುದಿಲ್ಲ. ಪಲ್ಲವರಿಂದ ಅವಮಾನಿತನಾದ ಮಯೂರವರ್ಮ ಹಿಂದಿರುಗಿ ಚಂದ್ರವಳ್ಳಿಯ ಘನ ಕಾಡಿನಲ್ಲಿ ಅಂದಿನ ಶ್ರೀ ಪರ್ವತ ಇಂದಿನ ದವಳಪ್ಪನಗುಡ್ಡ ಸುತ್ತ ಮುತ್ತ ಇಲ್ಲಿನ ಜನರನ್ನು ಒಳಗೊಂಡು ಶಸ್ತ್ರಭ್ಯಾಸ ಮಾಡಿ ಉನ್ನತ ಸೈನ್ಯ ಕಟ್ಟಿ ಪಲ್ಲವರೊಡನೆ ಕೆಚ್ಚದೆಯಿಂದ ಹೋರಾಡಿ ಅವರನ್ನು ಸೋಲಿಸಿ ಕನ್ನಡದ ಪ್ರಥಮ ಸಾಮ್ರಾಜ್ಯ ಚಂದ್ರವಳ್ಳಿಯಲ್ಲಿ ಸ್ಥಾಪನೆ ಮಾಡಿರುವುದು ಕನ್ನಡಿಗರಾದ ನಮಗೆ ಅದರಲ್ಲೂ ಚಿತ್ರದುರ್ಗರವರಾದ ನಮಗೆ ಅತ್ಯಂತ ಹೆಮ್ಮೆ ಪಡುವಂತ ವಿಷಯವಾಗಿದೆ. ಇದಕ್ಕೆ ಪೂರಕವಾಗಿ ಚಂದ್ರವಳ್ಳಿಯ ಹುಲೆಗುಂದಿ ದೇವಸ್ಥಾನದ ಹತ್ತಿರ ಇರುವ ಕಲ್ಲಿನ ಮೇಲೆ ಮಯೂರವರ್ಮನ ಶಾಸನ ಇರುವುದು ಎಷ್ಟೋ ಜನಗಳಿಗೆ ತಿಳಿದಿರುವುದಿಲ್ಲ. ಚಂದ್ರವಳ್ಳಿ ಕೆರೆ ಬಲಪಡಿಸಿ ನಿರ್ವಹಣೆ ಮಾಡಿರುವುದು, ಚಂದ್ರವಳ್ಳಿ ಗುಹೆಯ ನಿರ್ವಹಣೆ ಆ ಕಾಲಘಟದಲ್ಲೇ ಆಗಿರುತ್ತದೆ. ನಮ್ಮ ಈ ಇತಿಹಾಸ ಹೇಳುವ ಮಯೂರವರ್ಮನ ಕಲಾಕೃತಿ, ಚಂದ್ರವಳ್ಳಿ ಕೆರೆ, ದವಳಪ್ಪನಗುಡ್ಡ ಹಾಗೂ ಕಲ್ಲಿನ ಮೇಲೆ ಇರುವ ಶಾಸನ ಪರಿಚಯಿಸುವಂತೆ ಪ್ರದರ್ಶನಗೊಳಿಸಲಾಗುವುದು ಎಂದು ಹೇಳಿದರು.

ಸ್ವಾವಲಂಬಿ ರೈತ: ಪ್ರಸ್ತುತ ನಮ್ಮ ರೈತರು ಬೀಜಗಳಿಗೆ, ಗೊಬ್ಬರಗಳು, ಉಳುಮೆ ಮಾಡಲು ಇತ್ಯಾದಿ ಎಲ್ಲಾ ಕೆಲಸಗಳಿಗೂ ಬೇರೆಯವರ ಮೇಲೆ ಅವಲಂಬನೆಯಾಗಿರುವುದು ಹಾಗೂ ಖರ್ಚುವೆಚ್ಚಗಳು ಹೆಚ್ಚಾಗಿ ಮಾಡುತ್ತಿರುವುದು ಕಂಡುಬರುತ್ತಿದೆ. ಆದರೆ ಹಿಂದಿನ ಕಾಲದ ನಮ್ಮ ರೈತ ತನ್ನದೇ ಆದ ಬೀಜ, ತನ್ನದೇ ಗೊಬ್ಬರ, ಹಸು ಕರುಗಳೊಂದಿಗೆ ಎಲ್ಲಾ ಕೆಲಸಗಳನ್ನು ಸ್ವಂತ ಮಾಡಿ ಬೀಜ ಗೊಬ್ಬರ ಇತ್ಯಾದಿಗಳಿಗೆ ಯಾರನ್ನೂ ಬೇಡದೇ ಸ್ವಾವಲಂಭಿಯಾಗಿ ಅತ್ಯುತ್ತಮ ಕೃಷಿ ಮಾಡುತ್ತಿದ್ದರು, ಅಲ್ಲದೇ ಸುತ್ತಾ ಮುತ್ತಾ ಇರುವ ನಿಸರ್ಗದೊಂದಿಗೆ ಪ್ರಾಣಿ ಪಕ್ಷಿಗಳೊಂದಿಗೆ ಸಹಬಾಳ್ವೆಯಿಂದ ಬದುಕುತ್ತಿದ್ದರು. ಅಂತಹ ಸ್ವಾವಲಂಬಿ ರೈತ ವಿವಿಧ ಗಿಡಗಳ ತೋಟ ಎರೆಹುಳು ಗೊಬ್ಬರ ಘಟಕ, ಜೀವಸಾರ ಘಟಕ, ಗೊಬರ್ ಗ್ಯಾಸ್ ಉತ್ಪಾದನೆ, ಕೃಷಿಹೊಂಡ, ಮಳೆ ನೀರು ಕೊಯ್ಲು ಘಟಕ, ತನ್ನದೇ ಎತ್ತುಗಳಿಂದ ಉಳುಮೆ ಮಾಡುವುದು  ಇತ್ಯಾದಿ ಕೆಲಸ ನಿರ್ವಹಿಸಿ ಸ್ವಾವಲಂಬಿಯಾಗಿ ಬದುಕುತ್ತಿರುವ ರೈತನ ಪರಿಚಯಿಸುವಂತೆ ಪ್ರದರ್ಶನಗೊಳಿಸಲಾಗುವುದು ಎಂದರು.

ವಾಣಿವಿಲಾಸ ಸಾಗರ: ಮಾರಿಕಣಿವೆ ಎಂದು ಜನಪ್ರಿಯವಾಗಿ ಕರೆಯುವ ವಾಣಿವಿಲಾಸ ಸಾಗರ ಕರ್ನಾಟಕದ ಹಳೇಯ ಆಣಿಕಟ್ಟುಗಳಲ್ಲಿ ಒಂದಾಗಿದ್ದು, ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಹರಿಯುವ ವೇದಾವತಿ ನದಿಗೆ ಅಡ್ಡಲಾಗಿ ಹಿರಿಯೂರಿನ ಮಾರಿಕಣಿವೆಯಲ್ಲಿ ಕಟ್ಟಲಾಗಿದ್ದು, ಈ ಡ್ಯಾಂನ ಜಲಾನಯನ ಪ್ರದೇಶವು ಸುಮಾರು 10 ಸಾವಿರ ಹೆಕ್ಟರ್‍ಗೂ ಅಧಿಕವಿದ್ದು, ಚಿತ್ರದುರ್ಗ ಹಾಗೂ ಹಿರಿಯೂರು ನಗರಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿದೆ.  20ನೇ ಶತಮಾನದ ಆರಂಭದಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು  ಚಿತ್ರದುರ್ಗ ಜನತೆಗೆ ಕೊಡುಗೆಯಾಗಿ ನೀಡಿದ್ದರು. ಯಾವುದೇ ಸಿಮೆಂಟ್ ಉಪಯೋಗಿಸದೆ ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದ್ದು, ಅಣೆಕಟ್ಟಿನ ಉತ್ತರದ ಬದಿಯಿಂದ ನೋಡಿದಾಗ ಭಾರತದ ಭೂ ಪಟವನ್ನು ನಾವು ಕಾಣಬಹುದು. ಪ್ರಸ್ತುತ ಡ್ಯಾಂ ಭರ್ತಿಯಾಗಿದ್ದು, ಇತ್ತೀಚಿಗೆ ಮುಖ್ಯಮಂತ್ರಿಗಳು ಬಾಗಿನ ಅರ್ಪಣೆ ಮಾಡಿದ್ದು, ತುಂಬಿದ ಡ್ಯಾಂ ಅನ್ನು ಸಂಭ್ರಮಿಸುವ ಸೂಚಕವಾಗಿ ವಾಣಿ ವಿಲಾಸ ಸಾಗರ ಅಣೆಕಟ್ಟಿನ ಕಲಾಕೃತಿ  ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಜೀವನದಲ್ಲಿ ಗೆಡ್ಡೆ ಗೆಣಸುಗಳ ಮಹತ್ವದ ಅರಿವು ಮೂಡಿಸಲು ಹಾಗೂ ರೈತರಿಗೆ ಆದಾಯದ ದೃಷ್ಟಿಯಿಂದ ಮಹತ್ವದ ಬೆಳೆಗಳಾಗಿರುವ ವಿವಿಧ ಜಾತಿಯ ಗೆಡ್ಡೆ ಗೆಣಸುಗಳ ಕಂದಮೂಲಗಳ ಪರಿಚಯ ಹಾಗೂ ಮಾಹಿತಿ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ತರಕಾರಿ ಕೆತ್ತನೆಯಲ್ಲಿ ಪ್ರದರ್ಶಿಸಲಾಗುವುದು. ತೆಂಗಿನ ಚಿಪ್ಪಿನಲ್ಲಿ ವಿವಿಧ ರೀತಿಯ ಕಲಾಕೃತಿಗಳನ್ನು ಕೆತ್ತೆನೆ ಮಾಡಿದ ಪ್ರದರ್ಶಿಕೆಗಳನ್ನು ಪ್ರದರ್ಶಿಸಲಾಗುವುದು ಹಾಗೂ ಜಿಲ್ಲೆಯ ರೈತರು ಬೆಳೆದಿರುವ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಹಾಗೂ ಚಿತ್ರದುರ್ಗದ ಖ್ಯಾತ ಚಿತ್ರಕಲಾವಿದರಿಂದ ಅಕ್ರಾಲಿಕ್, ಜಲವರ್ಣ ಹಾಗೂ ಆಯಿಲ್ ಮಾಧ್ಯಮದ ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಚಿತ್ರಕಲಾವಿದರಾದ ದಾದಾ ಚಿತ್ರದುರ್ಗ, ನಾಗರಾಜ್ ಬೇದ್ರೆ, ಜವಳಿ ಶಾಂತಕುಮಾರ್, ನವೀನ್ ಅವರು ರಚಿಸಿದ  ಕಲಾಕೃತಿಗಳನ್ನ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.

ನೀರು ಹರಿಯುವಂತೆ ಇರುವ ಜಲಪಾತಗಳು, ವಿವಿಧ ತರಹದ ಬೋನ್ಸಾಯ್ ಗಿಡಗಳ ಪ್ರದರ್ಶನ, ಮಕ್ಕಳ ಆಕರ್ಷಣೆಗಾಗಿ ಫಲ ಪುಷ್ಪ ಪ್ರದರ್ಶನದಲ್ಲಿ ಡೈನೋಸಾರಸ್‍ನ ಕಲಾಕೃತಿಯನ್ನು ಪ್ರದರ್ಶಿಸಲಾಗುವುದು ಜೊತೆಗೆ ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ದೊರೆಯುತ್ತದೆ ಎಂದರು.

ವಿವಿಧ ಸ್ಪರ್ಧೆಗಳ ಆಯೋಜನೆ: ಫಲಪುಷ್ಪ ಪ್ರದರ್ಶನದ ಅಂಗವಾಗಿ ನಗರದ ವಿವಿಧ ಶಾಲೆಗಳ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ಧೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಪ್ಯಾನ್ಸಿ ಡ್ರಸ್ಸ್ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಜಿಲ್ಲಾ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ದೀಪಾ ಭೀಮಪ್ಪ ಹೊಂಕಳಿ ತಿಳಿಸಿದರು.

ಸಾರ್ವನಿಕರಿಗೆ ರಂಗೋಲಿ ಸ್ಪರ್ಧೆ, ಮನೆಯ ಆವರಣದಲ್ಲಿ ವಿವಿಧ ಜಾತಿಯ ಅಲಂಕಾರಿಕ ಕುಂಡಗಳ ಜೋಡಣೆ ಮತ್ತು ಮನೆ, ಸಂಸ್ಥೆಗಳ ಆವರಣದಲ್ಲಿ ಉದ್ಯಾನವನಗಳನ್ನು ನಿರ್ಮಿಸಿದವರಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರೋಪದ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಗುವುದು ಎಂದರು.

ಜಿಲ್ಲಾ ತೋಟಗಾರಿಕೆ ಸಂಘದ ಸಲಹಾ ಸಮಿತಿ ಅಧ್ಯಕ್ಷ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಕ್ಷೇತ್ರಕ್ಕಿಂತ ತೋಟಗಾರಿಕೆಯಲ್ಲಿ ಕ್ರಾಂತಿಯಾಗಿದೆ. ಆದರೆ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತೊಡಕಾಗಿದೆ. ಹಾಗಾಗಿ ಮಾರುಕಟ್ಟೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ, ಜಿಲ್ಲೆಯಲ್ಲಿ ತೋಟಗಾರಿಕೆಯಲ್ಲಿ ಯಶಸ್ಸು ಕಂಡ ರೈತರ ಬಗ್ಗೆ ಹೆಚ್ಚಿನ ಪ್ರಚಾರ ನೀಡಿದಲ್ಲಿ ಇತರರಿಗೂ ಇದು ಪ್ರೇರಣೆಯಾಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ್ ಬೇದ್ರೆ, ಕಾರ್ಯದರ್ಶಿ ಗಿರೀಶ್, ನಿರ್ದೇಶಕರಾದ ಶ್ವೇತಾ ವಿಶ್ವನಾಥ್, ಸತ್ಯನಾರಾಯಣ ನಾಯ್ಡು, ರೀನಾ ವೀರಭದ್ರಪ್ಪ, ಸುಮನಾ ತಿಮ್ಮಾರೆಡ್ಡಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *