ಚಿತ್ರದುರ್ಗ, ಸುದ್ದಿಒನ್,(ಆ.14) : 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಸರಿ, ಬಿಳಿ, ಹಸಿರು(ರಾಷ್ಟ್ರ ಧ್ವಜ) ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಏಳು ಸುತ್ತಿನ ಕೋಟೆಯ ಸೊಬಗನ್ನು ಭಾನುವಾರ ಸಂಜೆ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನತೆಗೆ ತೀವ್ರ ನಿರಾಸೆಯಾಗಿದೆ.
ಆಗಸ್ಟ್ 3 ರಿಂದ ಕೋಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆಗಸ್ಟ್15 ರ ಮುನ್ನಾ ದಿನ ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೋಟೆ ವೀಕ್ಷಣೆಗೆ ಆಗಮಿಸಿದ್ದರು. ಸಂಜೆಯಾದರು ಕೋಟೆಯಲ್ಲಿ ಜನರ ದಟ್ಟಣೆ ಇಳಿಕೆ ಕಾಣಲಿಲ್ಲ. ಇದರ ಜತೆಗೆ ವಿದ್ಯುತ್ ದೀಪಾಲಂಕಾರ ನೋಡಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕೋಟೆ ಮುಂಭಾಗದಲ್ಲಿ ಜಮಾವಣೆಯಾಗಿದ್ದರು.
ಸಂಜೆಯಾಗುತ್ತಿದ್ದಂತೆ ಜನರು ಕೋಟೆ ಕಡೆಗೆ ಹೋಗುತ್ತಿದ್ದರಿಂದ ಆನೆ ಬಾಗಿಲು, ರಂಗಯ್ಯಬಾಗಿಲು ಮತ್ತು ಜೋಗಿಮಟ್ಟಿ ರಸ್ತೆಯಿಂದ ಅಪಾರ ಜನರು ವಾಹನಗಳಲ್ಲಿ ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಕೋಟೆ ಮುಂಬಾಗದಲ್ಲಿ ಅಪಾರ ಜನಸ್ತೋಮವಿತ್ತು. ಇನ್ನು ಕೆಲ ಹೊತ್ತಿಗೆ ಲೈಟ್ ಆನ್ ಆಗುತ್ತವೆ ಎಂದು ಕಾಯುತ್ತಿದ್ದ ಜನರಿಗೆ ತೀವ್ರ ನಿರಾಸೆ ಎದುರಾಯಿತು.
ಕೋಟೆ ಒಳಗೆ ಜನರು ಹೆಚ್ಚಾಗಿರುವ ಕಾರಣ ವಿದ್ಯುತ್ ಲೈನ್ (ಕೇಬಲ್) ಗಳಿಗೆ ತೊಂದರೆಯಾಗಿ ಆಕಸ್ಮಿಕವಾಗಿ ಏನಾದರೂ ಅಪಾಯ ಎದುರಾಗುತ್ತದೆ ಎನ್ನುವ ಭೀತಿಯಿಂದ ಲೈಟ್ ಆನ್ ಮಾಡಿಲ್ಲ, ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು. ಜನದಟ್ಟಣೆ ಹೆಚ್ಚಾಗಿರುವುದರಿಂದ ಲೈಟ್ಸ್ ಆನ್ ಮಾಡಿಲ್ಲ. ಆನ್ ಮಾಡಿದರೆ ಮತ್ತಷ್ಟು ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಜನಸಂದಣಿ ಕಡಿಮೆಯಾದ ನಂತರ ಲೈಟ್ಸ್ ಆನ್ ಮಾಡುತ್ತಾರೆ ಎಂದು ಸಿಬ್ಬಂದಿ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಕೋಟೆಯ ದೃಶ್ಯ ವೈಭವದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಭಾನುವಾರವಾಗಿದ್ದರಿಂದ ಎಂದಿಗಿಂತಲೂ ಹೆಚ್ಚು ಜನರು ಆಗಮಿಸಿ ಕೇಸರಿ, ಬಿಳಿ, ಹಸಿರು(ರಾಷ್ಟ್ರ ಧ್ವಜ) ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಕೋಟೆಯನ್ನು ಕಣ್ತುಂಬಿಕೊಳ್ಳಲು ಬಂದ ಜನರು ನಿರಾಸೆಯಿಂದ ವಾಪಾಸಾಗುತ್ತಿದ್ದರು.