ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 23 : ನಗರದ ಜೆಸಿಆರ್ ಬಡಾವಣೆ 7 ನೇ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ ಘಟನೆ ಇಂದು (ಭಾನುವಾರ) ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಯಾಸೀನ್ (21 ವರ್ಷ), ಅಲ್ತಾಫ್ ಎಂ(21 ವರ್ಷ) ಎಂದು ಮತ್ತು ಗಾಯಗೊಂಡ ಯುವಕನನ್ನು ನಬೀಲ್ (21 ವರ್ಷ) ಎಂದು ಗುರುತಿಸಲಾಗಿದೆ. ಇವರೆಲ್ಲರೂ ನರ್ಸಿಂಗ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ನಗರದ ಜೆಸಿಆರ್ ಬಡಾವಣೆ ಕಡೆಯಿಂದ ವೇಗವಾಗಿ ಬಂದ (ಬೆಂಗಳೂರು ಕಡೆಯಿಂದ ಚಿತ್ರದುರ್ಗ ಮಾರ್ಗವಾಗಿ ಮುಂಡರಗಿಗೆ ತೆರಳುತ್ತಿದ್ದ) ಕೆಎಸ್ ಆರ್ ಟಿಸಿ ಬಸ್ ಬ್ರಿಡ್ಜ್ ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಮೂವರ ಪೈಕಿ ಯಾಸೀನ್ ಎಂಬ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತಿಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಲ್ತಾಫ್ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಗಾಯಗೊಂಡ ನಭಿಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


