ಚಿತ್ರದುರ್ಗ | ಭೂಮಿ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 31 : ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಆಚರಣೆಯೇ ಅದ್ಭುತ. ಹುಣ್ಣುಮೆ, ಅಮವಾಸ್ಯೆ ಯಿಂದ ಹಿಡಿದು ಪ್ರತಿಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ಅದೇ ರೀತಿಯಲ್ಲಿ ಇಂದು ನಾಡಿನಾದ್ಯಂತ ಎಳ್ಳಮವಾಸ್ಯೆಯನ್ನು ಅದರಲ್ಲೂ ವಿಶೇಷವಾಗಿ ರೈತಾಪಿ ವರ್ಗದವರು ಬಹಳ ಶ್ರದ್ದೆಯಿಂದ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಹೊಲಕ್ಕೆ ಹೋಗುವುದೇ ಸಂಭ್ರಮ: ಸಾಮಾನ್ಯವಾಗಿ ರೈತರು ಈ ಸಮಯದಲ್ಲಿ ಮುಖ್ಯವಾಗಿ ಜೋಳ ಹಾಗೂ ಕಡಲೆಯನ್ನು ಬೆಳೆಯುತ್ತಾರೆ. ಬಗೆಬಗೆಯ ಅಡುಗೆಯನ್ನು ತಯಾರಿಸಿಕೊಂಡು ಕುಡಿಯುವ ನೀರಿನೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಎತ್ತಿನ ಬಂಡಿಯನ್ನು ಅಲಂಕರಿಸಿಕೊಂಡು ಬಹಳ ವಿಜೃಂಭಣೆಯಿಂದ ಸಾಗುತ್ತಿದ್ದ ದೃಶ್ಯ ಆಕರ್ಷಣೆಯವಾಗಿತ್ತು. ಕೆಲವೆಡೆ ಬೈಕ್, ಕಾರುಗಳಲ್ಲಿ ತೆರಳಲಾಯಿತು.

ಎಳ್ಳು ಅಮವಾಸ್ಯೆ ದಿನವನ್ನು ಶೂನ್ಯ ಮಾಸದ ಆರಂಭದ ದಿನವನ್ನಾಗಿ ಪರಿಗಣಿಸಿ, ಈ ಭಾಗದ ರೈತರು ಸೋಮವಾರ, ಮಂಗಳವಾರ ತುರುವನೂರು ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ತಮ್ಮ ತಮ್ಮ ಜಮೀನುಗಳಿಗೆ ಸಿಂಗರಿದ ಎತ್ತಿನ ಬಂಡಿಯಲ್ಲಿ ಕುಟುಂಬ ಸಮೇತರಾಗಿ ಹೊಲಗಳಿಗೆ ತೆರಳಿ ಇಂದಿನ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ.
ಭೂಮಿ ತಾಯಿಗೆ ಸೀಮಂತ ಮಾಡುವ ಕಾರ್ಯವೆಂದು ಈ ಹಬ್ಬವನ್ನು ಆಚರಿಸುತ್ತಾರೆ.

ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಮಾಡುವ ರೀತಿಯಲ್ಲಿಯೇ ಹೊಲದಲ್ಲಿ ಭೂಮಿ ತಾಯಿ ಹೊಲದಲ್ಲಿ ಫಸಲು ಮೈದುಂಬಿರುವ ಈ ವೇಳೆಯಲ್ಲಿ ಸೀಮಂತ ಸಂಭ್ರಮ ಮಾಡಲಾಗುತ್ತದೆ.

ಮನೆಯಲ್ಲಿ ಮಾಡಿದ ವಿವಿಧ ಬಗೆಯ ಸಿಹಿತಿನಿಸುಗಳು ಸೇರಿದಂತೆ ವಿಶೇಷ ಖಾದ್ಯಗಳನ್ನು ಹೊತ್ತು ತೆರಳುತ್ತಾರೆ. ಹೊಲದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿ, ಮನೆಯಿಂದ ತಂದಿದ್ದ ಹೋಳಿಗೆ,ಹಾಲು, ತುಪ್ಪ, ಅನ್ನ, ನೈವೇದ್ಯವನ್ನು ಸಮರ್ಪಿಸಿ ಭೂಮಿ ತಾಯಿಯನ್ನು ಪೂಜಿಸಲಾಗುತ್ತದೆ. ಫಲವತ್ತಾಗಿ ಬೆಳೆದು ನಿಂತ ಹಿಂಗಾರು ಹಂಗಾಮಿನ ಜೋಳ, ಕಡಲೆ, ಮೆಕ್ಕೆಜೋಳ, ಗೋಧಿ, ಈರುಳ್ಳಿ, ತೊಗರಿ ಮೊದಲಾದ ಬೆಳೆಗಳಿಗೆ ಪೂಜೆ ಸಲ್ಲಿಸಿ ಅನ್ನದಾತರು ಸಂತೃಪ್ತ ಭಾವ ಮೆರೆದರು.

ಚರಗ ಚೆಲ್ಲುವ ಸಂಭ್ರಮ :
ವಿಶೇಷವಾಗಿ ಹೊಲದ ತುಂಬೆಲ್ಲ ಚರಗ ಚೆಲ್ಲುವ ಆಚರಿಸಲಾಯಿತು. ಹೋಳಿಗೆ,ಕಡುಬು, ಪಾಯಸ, ಮೊಸರನ್ನ ಹೀಗೆ ವಿವಿಧ ತರಹದ ಆಹಾರದ ತಿನಿಸುಗಳನ್ನು ತಯಾರಿಸಿಕೊಂಡು ಭೂಮಿ ತಾಯಿಗೆ ಚರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸಲಾಯಿತು. ಈ‌ ಹಬ್ಬದ ಆಚರಣೆ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಅಮವಾಸ್ಯೆ ಹೊತ್ತಿಗೆ ಕಪ್ಪು ಮಣ್ಣನ್ನು ಹೊಂದಿರುವ ರೈತರ ಹೊಲದಲ್ಲಿ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲಿಯೂ ಜೋಳದ ಮಧ್ಯೆ ಕಡಲೆ ಬೆಳೆಗೆ ಸಿಡಿ ರೋಗ ಹಾಗೂ ಕಾಯಿಕೊರಕ ಎಂಬ ಹುಳು ಬಿದ್ದು ಹಾನಿ ಮಾಡುತ್ತದೆ.

ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ.. ಎಂದು ಹೇಳುತ್ತ ಭೂ ತಾಯಿಗೆ ಚರಗ ಚೆಲ್ಲಿದರು. ಬೆಳೆಯ ಮಧ್ಯೆ ಆಹಾರ ತಿನ್ನಲು ಹಕ್ಕಿಗಳು ಇಳಿಯುತ್ತವೆ. ಆಗ ಆಹಾರದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳವನ್ನು ಕೂಡ ತಿನ್ನುತ್ತವೆ. ಇದರಿಂದ ಈ ಹುಳುಗಳ ನಿಯಂತ್ರಣವಾಗಿ, ಬೆಳೆಯ ಹುಲುಸು ಹೆಚ್ಚಾಗುವದೇ ಈ ಆಚರಣೆ ಹಿಂದೆ ವೈಜ್ಞಾನಿಕತೆ ಅಡಗಿದೆ.

ತಲೆ ತಲಾಂತರದಿಂದ ಚರಗ ಚೆಲ್ಲುವ ಹಬ್ಬವನ್ನು ನಮ್ಮ ಪೂರ್ವಜರು ಆಚರಿಸುತ್ತ ಬಂದಿರುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಎಳ್ಳ ಅಮಾವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಅನ್ನದಾತರ ಬೆವರಿನ ಫಲವಾಗಿ ಬೆಳೆದು ನಿಂತಿರುತ್ತದೆ. ಈ ಸಂದರ್ಭದಲ್ಲಿ ಸೀಮಂತ ಮಾದರಿಯಲ್ಲಿ ಚರಗ ಚೆಲ್ಲುವುದರಿಂದ ಉತ್ತಮ ಫಸಲು ರೈತರ ಕೈ ಸೇರುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!