ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.08 : ನಗರದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಶೆಟ್ಟಿಯವರಿಗೆ ಕಳೆದ ತಿಂಗಳು ನಡೆದಿದ್ದ ಸೈಬರ್ ವಂಚನೆ ಪ್ರಕರಣವನ್ನು ಚಿತ್ರದುರ್ಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಭೇದಿಸಿದ್ದಾರೆ.
ನಗರದ ಹಿರಿಯ ವೈದ್ಯರಾದ ಶ್ರೀನಿವಾಸ್ ಶೆಟ್ಟಿಯವರಿಗೆ ಕಳೆದ ಆಗಸ್ಟ್ 25 ರಂದು ಸೈಬರ್ ವಂಚಕರು ಕರೆ ಮಾಡಿ ನಾವೂ TRAI & ಮುಂಬೈ ಪೊಲೀಸರು ಎಂದು ಹೇಳಿ ಅವರ ಖಾತೆಯಿಂದ ವಂಚಕರ ಖಾತೆಗೆ 1 ಕೋಟಿ 27ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಈ ಕುರಿತು ನಗರದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ದೂರಿನ ಮೇರೆಗೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಬಂಡಾರು ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಕುಮಾರಸ್ವಾಮಿ ಎಸ್ ಜೆ., ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಪೊಲೀಸ್ ಠಾಣೆರವರಾದ ಉಮೇಶ್ ಈಶ್ವರ್ ನಾಯ್ಕ್ ರವರ ನಾಯಕತ್ವದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವೆಂಕಟೇಶ್ ಎನ್., D.S.B ಬ್ರಾಂಚ್ ಪಿಎಸ್‌ಐ ಸತೀಶ್ ನಾಯ್ಕ್, ಸಿಬ್ಬಂದಿಗಳಾದ ಕೆಂಚಪ್ಪ, ಗಗನ್ ದೀಪ್ ರವರೊಂದಿಗೆ ಪ್ರಕರಣವನ್ನು ಬೆನ್ನತ್ತಿದ್ದರು.
ಅಸ್ಸಾಂನ ಶಿವಸಾಗರ್ ಜಿಲ್ಲೆಯ ಭಾನ್ ಮುಖ್ ಪತ್ತರ್ ಗ್ರಾಮಕ್ಕೆ ಹೋಗಿ ಆರೋಪಿ ಪಬನ್ ಕುಮಾರ್ ಬೋರ್ ಪಾತ್ರಾರವರನ್ನು ಸೆಪ್ಟೆಂಬರ್ 05 ರಂದು ಬಂಧಿಸಿ ಅವನಿಂದ ಮಾಹಿತಿ ಪಡೆದು ಇನ್ನೊಬ್ಬ ಆರೋಪಿ ಜಾಕೀರ್ ಆಲಂ ಬೋರಾನನ್ನು ಸೆಪ್ಟೆಂಬರ್ 07 ರಂದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ತಿಳಿದುಬಂದಿದ್ದು ಬಂಧಿಸಿ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಪ್ರಕರಣದಲ್ಲಿ ಇದುವರೆಗೆ ವಿವಿಧ ಖಾತೆಗಳಲ್ಲಿ 16,89,000/- ರೂ ಫ್ರೀಜ್ ಮಾಡಿಸಿದ್ದು ಮತ್ತಷ್ಟು ಹಣವನ್ನು ಫ್ರೀಜ್ ಮಾಡಿಸಿ ದೂರುದಾರರಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣ ವರದಿಯಾದ ಕೇವಲ 15 ದಿನಗಳಲ್ಲಿ ಪ್ರಕರಣವನ್ನು ಭೇಧಿಸಿದ ಸಿಇಎನ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ತಾಂತ್ರಿಕ ವಿಶ್ಲೇಷಣೆ ನಡೆಸಿದ ಸಿಬ್ಬಂದಿಯರಿಗೆ ಪೊಲೀಸ್ ಅಧೀಕ್ಷಕರು ಶಾಘಿಸಿರುತ್ತಾರೆ.