ಸುದ್ದಿಒನ್ ಚಿತ್ರದುರ್ಗ, (ಡಿ.03) : ಅಬಕಾರಿ ಇಲಾಖೆಯ ಡಿ.ಎಸ್.ಪಿ. ಬಾರ್ ಒಂದರ ಸ್ಟಾಕ್ ಪರಿಶೀಲನೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಟಿ.ಎನ್.ರಾಜು ಅವರಿಂದ 15,000/- ರೂ ಲಂಚದ ಹಣವನ್ನು ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಹೊಳಲ್ಕೆರೆ ತಾಲ್ಲೂಕು ಬಂಜಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀನರಸಿಂಹ ಲಾಡ್ಮಿಂಗ್ ಬಾರ್ ಅಂಡ್ ರೆಸ್ಟೋರೆಂಟ್ ನ ಮಾಲೀಕ ನೀಡಿದ ದೂರಿನನ್ವಯ ಎ.ಸಿ.ಬಿ.ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.
ಅಬಕಾರಿ ಡಿ.ಎಸ್.ಪಿ. ಯವರು ಪದೇ ಪದೇ ಬಾರ್ ಮಾಲೀಕರಿಗೆ ಅಕೌಂಟ್ ಬುಕ್ ಪರಿಶೀಲಿಸುತ್ತೇನೆ ಎಂದು ಹೇಳಿ ಅಕೌಂಟ್ ಬುಕ್ ಅನ್ನು ತೆಗೆದುಕೊಂಡು ಹೋಗುವುದು ಮಾಡುತ್ತಿದ್ದು, ಸ್ಟಾಕ್ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಅಕೌಂಟ್ ಬುಕ್ ಸರಿಯಾಗಿ ಬರೆದಿಲ್ಲ ನಿಮ್ಮ ಮೇಲೆ ಕೇಸ್ ಮಾಡುತ್ತೇನೆ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡಿಸುತ್ತೇನೆ ಎಂದು ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಅದರಂತೆ, ಇಂದು (ಶುಕ್ರವಾರ) ಬಾರ್ ಮಾಲೀಕರಿಂದ ರೂ.15,000/- ಲಂಚದ ಹಣವನ್ನು ಪಡೆಯುವಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ. ಸದರಿ ಸಮಯದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಅವರು ಸ್ವೀಕರಿಸಿದ ಲಂಚದ ಹಣವನ್ನು ಜಪ್ತು ಮಾಡಲಾಗಿರುತ್ತದೆ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಎ.ಸಿ.ಬಿ. ದಾವಣಗೆರೆ ಪೂರ್ವ ವಲಯದ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ರವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಚಿತ್ರದುರ್ಗ ಎ.ಸಿ.ಬಿ.ಯ ಡಿಎಸ್‌ಪಿ ಬಸವರಾಜ್ ಮಗದುಮ್, ಪಿ.ಐ. ಪ್ರವೀಣ್ ಕುಮಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.