ಚಿತ್ರದುರ್ಗ | ನಗರದಲ್ಲಿ ವ್ಯರ್ಥವಾಗಿ ಹರಿಯುತ್ತಿರುವ ಕುಡಿಯುವ ನೀರು, ಜಿಲ್ಲಾಧಿಕಾರಿಗೆ ದೂರು….!

2 Min Read

ಸುದ್ದಿಒನ್, ಚಿತ್ರದುರ್ಗ, ಜನವರಿ.05 : ದಿನ ಬೆಳಗಾದರೆ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆಯೂ ಕಾಣುತ್ತಿದೆ. ಈ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗದಂತೆ ಎಚ್ಚರ ವಹಿಸುವುದು ಎಲ್ಲರ ಜವಾಬ್ದಾರಿ.

*ಚಿತ್ರದುರ್ಗ | ನಗರದಲ್ಲಿ ವ್ಯರ್ಥವಾಗಿ ಹರಿಯುತ್ತಿರುವ ಕುಡಿಯುವ ನೀರು, ಜಿಲ್ಲಾಧಿಕಾರಿಗೆ ದೂರು….!*

*ಸುದ್ದಿಒನ್ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ*
https://chat.whatsapp.com/HqxcOqKfZYk6wWXgj0Wisu

ಬಯಲುಸೀಮೆ, ಬರದನಾಡು, ನಮ್ಮ ಕೋಟೆ ನಾಡು. ಈ ವರ್ಷ ಮಳೆ ಕಡಿಮೆಯಾಗಿದೆ. ಇಂತದರಲ್ಲಿ ಇರುವ ನೀರನ್ನೇ ಸಮರ್ಪಕವಾಗಿ ಪೂರೈಕೆ ಮಾಡದ ನಗರಸಭೆ ಅಧಿಕಾರಿಗಳು, ನೀರು ಪೋಲಾಗುತ್ತಿದ್ದರೂ, ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಎಎಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹೆಚ್. ಎಂ. ಫಾರುಖ್ ಅಲಿ ಆರೋಪಿಸಿ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ನಗರದ ಎಲ್ಲಾ ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದೆ. ಕೆಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಜೆಸಿಬಿಗಳಿಂದ ರಸ್ತೆಯಲ್ಲಿ ಅಗೆಯಲಾಗಿದೆ. ಹೀಗಾಗಿ ನಲ್ಲಿಯ ನೀರಿನ ಪೈಪ್‌ ಒಡೆದು ಹೋಗಿವೆ. ನೀರು ಪೂರೈಕೆ ಆರಂಭಿಸುತ್ತಿದ್ದಂತೆಯೇ ಒಡೆದ ಪೈಪ್‌ಗಳಿಂದ ನೀರು ವ್ಯರ್ಥವಾಗಿ ಹರಿಯುತ್ತಿದೆ. ಈ ನೀರು ರಸ್ತೆಯ ಮೂಲಕ ಚರಂಡಿ ಸೇರುತ್ತಿದೆ.

ನಗರದ 20ನೇ ವಾರ್ಡ್ ರಾಮದಾಸ್ ಕಾಂಪೌಂಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರು ಪ್ರತಿದಿನವೂ ವ್ಯತ್ಯರ್ಥವಾಗಿ ಹರಿಯುತ್ತದೆ. ಇಲ್ಲಿನ ಗುಲ್ಸನ್ ಮಸೀದಿ ಹಿಂಭಾಗದಿಂದ ಹಳೆಯ ರವಿ ಮ್ಯಾಚ್ ಫ್ಯಾಕ್ಟರಿಯ ರಸ್ತೆಯವರೆಗೂ ಕುಡಿಯುವ ನೀರು ರಸ್ತೆ ಮೂಲಕ ಪ್ರತಿನಿತ್ಯವೂ ವ್ಯರ್ಥವಾಗಿ ಹರಿಯುತ್ತಿದೆ. ಸುಮಾರು 10 ಎಕೆರೆ ಜಮೀನಿಗೆ ನೀರು ಹಾಯಿಸುವಷ್ಟು ನೀರು ವ್ಯರ್ಥವಾಗಿ ಹರಿಯುತ್ತಿದೆ. ಪ್ರತಿ ಬಾರಿ ನೀರು ಬಿಡುವಾಗ ಇಲ್ಲಿನ ನೀರಗಂಟಿಗೆ ನೀರು ಹರಿಯುತ್ತಿರುವುದರ ಬಗ್ಗೆ ತಿಳಿಸಿದ್ದರೂ ಉದಾಸೀನ ಮಾಡುತ್ತಿದ್ದಾನೆ. ಮತ್ತು ಇಲ್ಲಿಯ ನಿವಾಸಿಗಳು ರಸ್ತೆಯ ಮೂಲಕ ಓಡಾಡುವುದಕ್ಕೆ ತುಂಬಾ ತೊಂದರೆಯುಂಟಾಗಿದೆ. ದ್ವಿ-ಚಕ್ರ ವಾಹನಗಳು ಓಡಾಡುತ್ತಿರುವಾಗ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅವರ ಬಟ್ಟೆ ಮೇಲೆ ಗಲೀಜು ನೀರು ಸಿಡಿಯುತ್ತಿದೆ.

ಈ ಪರಿಸ್ಥಿತಿ ಇಂದು ನಿನ್ನೆಯದಲ್ಲ. ಸುಮಾರು ದಿನಗಳಿಂದ ಇದೇ ರೀತಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಗೋಪಾಲಪುರ, ಜೆಸಿಆರ್ ಬಡಾವಣೆ, ವಿಪಿ ಬಡಾವಣೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಹೀಗೆ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ನಾನು ಕಂಡಿದ್ದು, ಈ ಸಂಬಂಧ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಮತ್ತು ನೀರು ಅನಾವಶ್ಯಕವಾಗಿ ಪೋಲಾಗುವುದು ನಿಂತಿಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ.

ದಿನಾಂಕ: 04-01-2024 ರಂದು ಬೆಳಗ್ಗೆ 7:30 ರ ಸಮಯದಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿರುವ  ವಿಡಿಯೋ ವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ದೂರವಾಣಿ ಮೂಲಕ ಕರೆ ಮಾಡಿ ಈ ವ್ಯವಸ್ಥೆಯನ್ನು ಸರಿಪಡಿಸಲು ಮನವಿ ಮಾಡಿದ್ದೇನೆ.

ಆದ್ದರಿಂದ ಜಿಲ್ಲಾಧಿಕಾರಿಗಳಾದ ತಾವು ನಗರಸಭೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಇಂಜಿನಿಯರ್‌ರವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಸ್ತೆಗೆ ನೀರು ಹರಿಯುವುದನ್ನು ನಿಲ್ಲಿಸುವಂತೆ ಸೂಚಿಸಬೇಕು ಈ ಮೂಲಕ ಕುಡಿಯುವ ನೀರನ್ನು ಸಂರಕ್ಷಿಸಬೇಕು,  ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಎಎಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹೆಚ್. ಎಂ. ಫಾರುಖ್ ಅಲಿ ಮನವಿ ಸಲ್ಲಿಸಿದ್ದಾರೆ.

ಹೆಚ್. ಎಂ. ಫಾರುಖ್ ಅಲಿ, ಚಿತ್ರದುರ್ಗ                                  ಮೊ : 99727 66166

Share This Article
Leave a Comment

Leave a Reply

Your email address will not be published. Required fields are marked *