ಚಿತ್ರದುರ್ಗ, (ಏ.13) : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿ ಬಿ.ಧನಂಜಯ ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಘೋಷಣೆ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಘಟಕಕ್ಕೆ 2022-2025ನೇ ಸಾಲಿನ ಅವಧಿಗೆ 2022ರ ಫೆಬ್ರವರಿ 27ರಂದು ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ನ್ಯಾಯಾಲಯದ ಆದೇಶ ಪ್ರಕಟವಾದ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾ ಸಂಘಕ್ಕೆ ಚುನಾಯಿತರಾದವರ ಪಟ್ಟಿಯನ್ನು ಪ್ರಕಟಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಿನೇಶ್ ಗೌಡಗೆರೆ, ಉಪಾಧ್ಯಕ್ಷರಾಗಿ ಡಿ.ಈಶ್ವರಪ್ಪ, ತಿಪ್ಪೇಸ್ವಾಮಿ ಎನ್.ಡಿ, ಸಿ.ಪಿ.ಮಾರುತಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಸಿದ್ದರಾಜು, ಜಿಲ್ಲಾ ಕಾರ್ಯದರ್ಶಿಗಳಾಗಿ ವೀರೇಶ್ ವಿ, ನಾಗರಾಜಕಟ್ಟೆ, ಖಜಾಂಚಿಯಾಗಿ ಕುಮಾರಸ್ವಾಮಿ ಡಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಯೋಗೀಶ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಅಂಜಿನಪ್ಪ, ಜೆ.ತಿಮ್ಮಣ್ಣ, ಓ.ರಾಮಸ್ವಾಮಿ, ಎನ್.ಮಾರುತಿ, ನಾಗೇಶ ಬಿ.ಆರ್, ಎಂ.ರಾಜು, ಹೆಚ್.ತಿಪ್ಪೇಸ್ವಾಮಿ, ಬಿ.ಎಸ್.ಲಕ್ಷ್ಮಣ್, ನಾಗತಿಹಳ್ಳಿ ಮಂಜುನಾಥ್, ಮುತ್ತುಸ್ವಾಮಿ ಕೆ.ಎಂ, ಎಂ.ಎನ್.ಅಹೋಬಳಪತಿ, ಎಸ್.ಜೆ.ದ್ವಾರಕನಾಥ್, ಎಂ.ಹನೀಫ್, ಈರಣ್ಣ ಯಾದವ್, ವಿನಾಯಕ ಬಿ.ಎಸ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಡಿ.ವಿ.ಜಿ ಅವರು ಕಟ್ಟಿದ ಇತಿಹಾಸವಿರುವ ಪತ್ರಕರ್ತರ ಸಂಘದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮ ಪುಣ್ಯ. ಅವರ ಮಾರ್ಗದರ್ಶನದಲ್ಲಿ ಸಂಘದ ಏಳಿಗೆ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಮೂಲಕ ಕಾರ್ಯನಿರತ ಪತ್ರಕರ್ತರ ಸಂಘದ ಆಶಯಗಳಿಗೆ ಧಕ್ಕೆಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರೆಲ್ಲರೂ ಒಟ್ಟಾಗಿ ಉತ್ತಮ ಆಡಳಿತ ನೀಡುವಂತೆ ನಮ್ಮನ್ನು ಬೆಂಬಲಿಸಿದ್ದಾರೆ. ಸರ್ಕಾರದಿಂದ ಮತ್ತು ರಾಜ್ಯ ಸಂಘದಿಂದ ಸಿಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಅರ್ಹ ಪತ್ರಕರ್ತರಿಗೆ ತಲುಪಿಸುವ ಕಾರ್ಯ ಮಾಡುವ ಮೂಲಕ ಸಂಘದ ಮೂಲಕ ಆಶಯ ಈಡೇರಿಕೆಗೆ ಕ್ರಮವಹಿಸಲಾಗುವುದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿ ಬಿ.ಧನಂಜಯ ಅವರನ್ನು ಸನ್ಮಾನಿಸಲಾಯಿತು. ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ, ಸಂಘದ ನುತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಪತ್ರಕರ್ತರು ಇದ್ದರು.
ಫೋಟೋ ವಿವರ: ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ದಿನೇಶ್ ಗೌಡಗೆರೆ ಅವರಿಗೆ ಚುನಾವಣಾಧಿಕಾರಿ ಬಿ.ಧನಂಜಯ ಪ್ರಮಾಣ ಪತ್ರ ವಿತರಿಸಿದರು.