ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಆ.5) : ಕಲುಷಿತ ನೀರು ಸೇವಿಸಿ 5 ಜನ ಮೃತಪಟ್ಟು, 180ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಚಿತ್ರದುರ್ಗ ನಗರದ ಕವಾಡಿಗರಹಟ್ಟಿಗೆ ಶನಿವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕವಾಡಿಗರಹಟ್ಟಿಯ ಘಟನೆಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು, ಸಾರ್ವಜನಿಕರ ಅಹವಾಲು ಆಲಿಸಿದರು. ಆರೋಗ್ಯ ಇಲಾಖೆ ವತಿಯಿಂದ ಘಟನೆಯ ಸಂಪೂರ್ಣ ಪರಿಶೀಲನೆ ಹಾಗೂ ಮಾಹಿತಿ ಪಡೆಯಲು ಈಗಾಗಲೇ ತಜ್ಞರ ತಂಡವನ್ನು ರಾಜ್ಯ ಸರ್ಕಾರ ನೇಮಿಸಿದೆ. ಈ ಅಧಿಕಾರಿಗಳು ಕವಾಡಿಗರಹಟ್ಟಿ ಗ್ರಾಮದಲ್ಲಿ ಮನೆ ಮನೆ ಸರ್ವೇ ಕಾರ್ಯ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸ್ಥಳೀಯವಾಗಿ ನೀರು ಕಲುಷಿತಗೊಂಡಿರುವ ಸಾಧ್ಯತೆ ಇದೆಯೇ ಎಂಬುದನ್ನೂ ಅವಲೋಕಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಆರೋಗ್ಯ ಸಚಿವರಿಗೆ ತಿಳಿಸಿದರು.
ಪರಿಸ್ಥಿತಿಯ ಬಗ್ಗೆ ವಿವರವಾಗಿ ಅವಲೋಕಿಸಲು ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆ ವೈದ್ಯರ ತಂಡ ಕವಾಡಿಗರಹಟ್ಟಿಗೆ ಆಗಮಿಸಿ ಬೀಡು ಬಿಟ್ಟಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಬಿ.ಎಂ.ಆರ್.ಸಿ ಆಸ್ಪತ್ರೆಯಿಂದ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತಿದ್ದಾರೆ. ಸ್ಥಳದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನು ನೀಡಲಾಗಿದೆ. ತುರ್ತು ಸ್ಪಂದನಾ ತಂಡ ಗ್ರಾಮದಲ್ಲಿದ್ದು, ವಾಂತಿ ಬೇಧಿ ಲಕ್ಷಣ ಕಂಡುಬಂದರೆ ತಕ್ಷಣೆವೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ಹೇಳಿದರು.
ಕಾಲರಾ ರೋಗಕ್ಕೆ ತುರ್ತಾಗಿ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಪರಿಸ್ಥಿತಿ ಉಲ್ಬಣವಾಗುತ್ತದೆ. ಸರಿಯಾದ ಚಿಕಿತ್ಸೆ ನೀಡಲಾಗಿದೆಯೇ? ಎಂದು, ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರು.
ಘಟನೆಯಲ್ಲಿ ಅಸ್ವಸ್ಥರಾದವರಿಗೆ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮೃತರ ಪೈಕಿ ಒಬ್ಬರು ಬೆಂಗಳೂರು, ಇನ್ನೊಬ್ಬರು ದಾವಣಗೆರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದರು. ಕೆಲವು ಜನರು ಗುಣಲಕ್ಷಣ ಆಧರಿಸಿ ಮಾತ್ರೆಗಳನ್ನು ಪಡೆದು ಮನೆಯಲ್ಲಿ ಉಳಿದಿದ್ದರು. ರೋಗ ಲಕ್ಷಣ ಹೆಚ್ಚಾದ ಬಳಿಕ ಆಸ್ಪತ್ರೆ ದಾಖಲಾಗಿದ್ದಾರೆ. ತುರ್ತಾಗಿ ಚಿಕಿತ್ಸೆ ನೀಡಿ ಹೆಚ್ಚಿನ ಸಾವು ನೋವುಗಳು ಆಗದ ರೀತಿ ತಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಉತ್ತರಿಸಿದರು.
ಕವಾಡಿಗರಹಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸಹ ತೆರೆಯಲಾಗಿದೆ. ನೀರು ಕಲುಷಿತಗೊಳ್ಳಲು ಕಾಲರಾ ಬ್ಯಾಕ್ಟೀರಿಯಾ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಬಾದಿತ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮನೆಗಳು ಇದ್ದು, 2500ಕ್ಕೂ ಹೆಚ್ಚಿನ ಜನರು ವಾಸವಾಗಿದ್ದಾರೆ. ಇದರಲ್ಲಿ 180ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 155 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಡಿಹೆಚ್‍ಓ ಡಾ.ಆರ್.ರಂಗನಾಥ್ ಆರೋಗ್ಯ ಸಚಿವರಿಗೆ ಮಾಹಿತಿ ನೀಡಿದರು.
ಘಟನೆ ಆದ ತಕ್ಷಣ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಉತ್ತಮವಾಗಿ ಸ್ಪಂದನೆ ಮಾಡಿದ್ದಾರೆ. ತುರ್ತು ಚಿಕಿತ್ಸೆಯನ್ನು ನೀಡಿದ್ದಾರೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕವಾಡಿಗರಹಟ್ಟಿಯ ನಾಲ್ಕೈದು ಬೀದಿಗಳಲ್ಲಿ ಕಾಲರಾ ಉಲ್ಬಣಿಸಿದೆ ಎನ್ನವುದನ್ನು ಒಪ್ಪಲು ಸಾಧ್ಯವಿಲ್ಲ. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ಆಗಬೇಕು. ಸತ್ಯವನ್ನು ಮುಚ್ಚಿಹಾಕುವ ಕೆಲಸವಾಗಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಘಟನೆಯಲ್ಲಿ ಬಾಧಿತರಾದವರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು ಎಂದು ಗ್ರಾಮಸ್ಥರು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದರು.
ನಗರಸಭೆ ಕವಾಡಿಗರಹಟ್ಟಿಯ ಸ್ವಚ್ಛತೆ ಬಗ್ಗೆ ನಿರ್ಲಕ್ಷ ವಹಿಸಿದೆ. ಕಳೆದ ಹತ್ತು ವರ್ಷಗಳಿಂದ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ. ಘಟನೆಯ ನಂತರ ಈಗ ಬಂದು ಸ್ವಚ್ಛಗೊಳಿಸಿದ್ದಾರೆ ಸ್ಥಳೀಕರು ಅಸಮಾಧಾನ ವ್ಯಕ್ತಪಡಿಸಿದರು.
ಸತ್ಯವನ್ನು ಮುಚ್ಚಿ ಹಾಕುವ ಪ್ರಮೇಯವೇ ಇಲ್ಲ. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಘಟನೆಯಲ್ಲಿ ಮೃತಪಟ್ಟ ಪಾರ್ವತಮ್ಮ ಹಾಗೂ ರುದ್ರಪ್ಪ ಅವರ ಮನೆಗೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ತಲಾ 10 ಲಕ್ಷ ಪರಿಹಾರ ಚೆಕ್ ವಿತರಣೆ:
ಕವಾಡಿಗರಹಟ್ಟಿಯಲ್ಲಿನ ಕಲುಷಿತ ನೀರು ಸೇವನೆಯ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.5 ಲಕ್ಷ ಹಾಗೂ ನಗರಸಭೆ ನಿಧಿಯಿಂದ ರೂ.5 ಲಕ್ಷ ಸೇರಿ, ತಲಾ ರೂ.10 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಈ ಚೆಕ್‍ಗಳನ್ನು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೃತರ ಕುಟುಂಬ ವರ್ಗದವರಿಗೆ ಹಸ್ತಾಂತರಿಸಿದರು. ಮೃತಪಟ್ಟ ಐದು ಜನರ ಪೈಕಿ ನಾಲ್ವರು ಕುಟುಂಬದವರಿಗೆ ಚೆಕ್ ನೀಡಲಾಗಿದೆ. ಓರ್ವ ಮೃತರ ಪತ್ನಿಯೂ ಆಸ್ಪತ್ರೆ ದಾಖಲಾಗಿದ್ದಾರೆ. ಹೀಗಾಗಿ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ತಕ್ಷಣ ಚೆಕ್ ವಿತರಣೆಯಾಗಲಿದೆ.
ಕವಾಡಿಗರಹಟ್ಟಿ ಘಟನೆ ಕುರಿತು ಸಚಿವರ ವಿಷಾದ: ಈ ಸಂದರ್ಭಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕವಾಡಿಗರಹಟ್ಟಿ ಘಟನೆ ತುಂಬಾ ನೋವುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕವಾಡಿಗರಹಟ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆ ಮಾಡಿ ವರದಿ ಕೊಡಲು ರಾಜ್ಯದಿಂದ ತಂಡ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರ ಯೋಗಕ್ಷೇಮ ವಿಚಾರಿಸಿ, ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ರೂ.10 ಲಕ್ಷ ಪರಿಹಾರ ಘೋಷಿಸಿ, ಪರಿಹಾರ ಧನವನ್ನು ವಿತರಣೆ ಮಾಡಿದ್ದಾರೆ.
ಶಾಸಕ ಕೆ.ಸಿ.ವೀರೇಂದ್ರ ಅವರು ನಿರಂತರವಾಗಿ ಕವಾಡಿಗರ ಹಟ್ಟಿ ಜನರಿಗೆ ಊಟ, ಔಷಧಿ ಸೇರಿದಂತೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಅಗತ್ಯ ನೆರವು ನೀಡುತ್ತಿದೆ ಎಂದರು.
ಕವಾಡಿಗರಹಟ್ಟಿಯ ಪ್ರಕರಣ ಮತ್ತೆ ಪುನರಾವರ್ತನೆಯಾಗಬಾರದು. ಯಾವ ಕಾರಣಕ್ಕೆ ಘಟನೆ ಸಂಭವಿಸಿದೆ, ಹೇಗೆ ಆಗಿದೆ ಎಂಬುವುದರ ಕುರಿತು ಸಂಪೂರ್ಣ ವರದಿಯನ್ನು ಜಿಲ್ಲಾಡಳಿತ, ನಗರಸಭೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ತನಿಖೆ ಮಾಡಿ ಸ್ಪಷ್ಟ ವರದಿ ಪಡೆದು ನಂತರ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕವಾಡಿಗರಹಟ್ಟಿಯ ಸಮಗ್ರ ಅಭಿವೃದ್ಧಿಗೆ ಕ್ರಮ: ಕವಾಡಿಗರಹಟ್ಟಿಯ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.
ಸರ್ಕಾರದ ಅನುದಾನ ಬಳಸಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಆದೇಶ ನೀಡಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು ಎಂದರು.
ಔಷಧಿಗೆ ಚೀಟಿ ಬರೆದುಕೊಡುವ ವೈದ್ಯರ ವಿರುದ್ಧ ಕ್ರಮ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಿನಿಂದ ಔಷಧಿಗಾಗಿ ಚೀಟಿ ಬರೆದು ಕೊಡುವ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹೊರಗಡೆ ಔಷಧಿಗಳನ್ನು ಬರೆದುಕೊಡುವಂತಿಲ್ಲ. ಆಸ್ಪತ್ರೆಯವರೇ ಖರೀದಿ ಮಾಡಿ ಔಷಧಿಗಳನ್ನು ವಿತರಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುವ ಕೆಲವು ಔಷಧಿಗಳಲ್ಲಿ ಕೊರತೆ ಇದೆ. ಆರೋಗ್ಯ ಇಲಾಖೆಯಿಂದಲೇ ಔಷಧಿ ಸರಬರಾಜು ಮಾಡುವುದು ತಡವಾಗಿದ್ದು, ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ಜಿಲ್ಲಾ ಆಸ್ಪತ್ರೆಗೆ ಭೇಟಿ, ಆರೋಗ್ಯ ವಿಚಾರಣೆ:
ಕವಾಡಿಗರಹಟ್ಟಿಯ ಭೇಟಿ ನಂತರ ನೇರವಾಗಿ ಆರೋಗ್ಯ ಸಚಿವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಳಿಗೆ ಹಣ ಪಡೆಯುತ್ತಿರುವ ಕುರಿತು ಸಚಿವರ ಗಮನಕ್ಕೆ ತಂದರು. ಇದರಿಂದ ಕುಪಿತರಾದ ಸಚಿವರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್ ಅವರಿಗೆ, ನಿಮ್ಮ ಮೇಲೆ ಸಾಕಷ್ಟು ದೂರುಗಳು ಬರುತ್ತಿವೆ. ಇಂತಹ ಘಟನೆಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ. ಹೆರಿಗೆ ಮಾಡಿಸಲು, ಎಕ್ಸರೇ, ಸ್ಕ್ಯಾನಿಂಗ್‍ಗಳಿಗೆ ಹಣ ಪಡೆಯುತ್ತಿರುವ ಕುರಿತು ಮಹಿಳೆಯರು ದೂರುಗಳನ್ನು ಆಸ್ಪತ್ರೆಯ ಆವರಣಲ್ಲಿ ನನಗೆ ಗಮನಕ್ಕೆ ತಂದಿದ್ದಾರೆ. ನೀವು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ, ಉಳಿದ ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ನಿಮ್ಮ ವಿರುದ್ದ ಸೂಕ್ತ ಕ್ರಮಕೈಗೊಂಡು ಅಮಾನತು ಮಾಡಲಾಗುವುದು ಎಂದು ತಿಳಿಸಿದರು.
ತತಕ್ಷಣವೇ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆರೋಗ್ಯ ಇಲಾಖೆ ಆಯುಕ್ತ ರಣದೀಪ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.