- ಭದ್ರೆಗಾಗಿ ಜನಜಾಗೃತಿಗೆ ಮುಂದಾದ ಸಮಿತಿ
- 27ಕ್ಕೆ ಬಾಗಿನ ಮೂಲಕ ಹೋರಾಟದ ಕಹಳೆ
- ಕಾಲು ಶತಮಾನದ ಚಳವಳಿ ನೆನಪು ಕಾರ್ಯಕ್ರಮ
- ನೀರಾವರಿ ಹೋರಾಟ ಸಮಿತಿ ನಿರ್ಧಾರ
ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ 25 ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದಿದ್ದ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮತ್ತೊಂದು ಚಳವಳಿಗೆ ಮುಂದಡಿ ಇಟ್ಟಿದೆ.
ಸಮಗ್ರ ನೀರಾವರಿ, ಕೆರೆ-ಕಟ್ಟೆಗಳ ಅಭಿವೃದ್ಧಿ, ಎಲ್ಲೆಡೆ ಗಿಡಗಳ ನೆಡುವುದು, ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಂವಾದ, ಭೂಮಿ ಸತ್ವ ಕಾಪಾಡಿಕೊಳ್ಳುವಂತೆ ಕೃಷಿಕರಲ್ಲಿ ಜಾಗೃತಿ, ಮುಖ್ಯಮಂತ್ರಿ ಬಳಿ ನಿಯೋಗ ಹೀಗೆ ವಿವಿಧ ಹಂತದ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿಯ ಸಂಚಾಲಕರು, ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಆಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು ಯೋಜನೆ ತ್ವರಿತಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೂ ಕಾಮಗಾರಿ ವಿಳಂಬ ಸೇರಿ ವಿವಿಧ ಸಮಸ್ಯೆಗಳು ಜೀವಂತವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ವಿವಿಧ ಹಂತದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಸಂಚಾಲಕ ಜಿ.ಎಸ್.ಉಜ್ಜನಪ್ಪ ಮಾತನಾಡಿ, ಜಿಲ್ಲೆಗೆ ಕಾಲಿಟ್ಟಿರುವ ಭದ್ರೆಗೆ ಗೌರವ ಸಮರ್ಪಣೆ ಮಾಡುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ. 89 ವರ್ಷಗಳ ನಂತರ ವಿವಿ ಸಾಗರ ಮೈದುಂಬಿದ್ದು, ಇದಕ್ಕೆ ಭದ್ರಾ ನೀರು ಹರಿದು ಬಂದಿರುವುದು ಮುಖ್ಯ ಕಾರಣ ಆಗಿದೆ. ಆದ್ದರಿಂದ ಜಿಲ್ಲೆಗೆ ಕಾಲಿಟ್ಟು, ವಿವಿ ಸಾಗರ ಒಡಲು ತುಂಬಿಸಿ, ಜಿಲ್ಲೆಯ ಜನರ ಸಂಭ್ರಮಕ್ಕೆ ಕಾರಣವಾಗಿರುವ ಭದ್ರೆಗೆ ಜನರ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ವಿವಿ ಸಾಗರದಲ್ಲಿ ಡಿಸೆಂಬರ್ 27ರಂದು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್, ಜಿಲ್ಲೆಯ ಮಠಾಧೀಶರು, ಶಾಸಕರು, ಸಂಸದರು, ಹಾಲಿ-ಮಾಜಿ ಜನಪ್ರತಿನಿಧಿಗಳು, ರೈತ, ಕಾರ್ಮಿಕ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಅಂದಾಜು ನಾಲ್ಕೈದು ಸಾವಿರ ಮಂದಿ ಸೇರಲಿದ್ದಾರೆ ಎಂದು ಹೇಳಿದರು.
ಬಾಗಿನ ಸಮರ್ಪಣೆ ಮೂಲಕ ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಆಗಬೇಕಾಗಿರುವ ಕಾಮಗಾರಿಗಳ ತ್ವರಿತ ಹಾಗೂ ಯೋಜನೆಗೆ ಶೀಘ್ರದಲ್ಲಿ ರಾಷ್ಟ್ರೀಯ ಮುದ್ರೆ ನೀಡುವಂತೆ ಒತ್ತಡ ತರಲಾಗುವುದು ಎಂದರು.
ಹೋರಾಟ ಸಮಿತಿ ಹುಟ್ಟಿಕೊಂಡು 25 ವರ್ಷ ಆಗಿದ್ದು, ಜಿಲ್ಲೆಗೆ ಭದ್ರಾ ನೀರು ತರಲು ಅಸಾಧ್ಯ ಎಂಬ ಮಾತನ್ನು ಜಿಲ್ಲೆಯ ಜನರನ್ನೊಳಗೊಂಡ ಚಳವಳಿ ಸುಳ್ಳು ಮಾಡಿದೆ. ಜೊತೆಗೆ ಈ ಇಪ್ಪತ್ತೈದು ವರ್ಷದಲ್ಲಿ ಮುಂಚೂಣಿಯಲ್ಲಿದ್ದ ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಎಸ್.ಎಂ.ಸದಾನಂದಯ್ಯ, ಬಿ.ಟಿ.ಚನ್ನಬಸಪ್ಪ ಹೀಗೆ ಅನೇಕ ನಾಯಕರು ಹಾಗೂ ಎಲೆಮರೆ ಕಾಯಿಯಂತೆ ಹೋರಾಟದೊಂದಿಗೆ ಹೆಜ್ಜೆ ಹಾಕುತ್ತಿದ್ದ ಬಹಳಷ್ಟು ಜನರು ಮರಣ ಹೊಂದಿದ್ದಾರೆ. ಅವರೆಲ್ಲರ ಸ್ಮರಣೆ ಜೊತೆಗೆ 25 ವರ್ಷದಲ್ಲಿ ಸವಿಸಿದ ಹೋರಾಟದ ಹಾದಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಬಳಿಗೆ ಜನಪ್ರತಿನಿಧಿಗಳು, ರೈತ, ಕಾರ್ಮಿಕ, ಕನ್ನಡಪರ ಸಂಘಟನೆಗಳನ್ನೊಳಗೊಂಡ ನಿಯೋಗ ತೆರಳಿ ಯೋಜನೆ ತ್ವರಿತಕ್ಕೆ ಹಾಗೂ ಕೃಷಿಕರ ಹಿತ, ಕೆರೆ-ಕಟ್ಟೆಗಳ ಭದ್ರಗೊಳಿಸಲು ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯ ತರಲಾಗುವುದು ಎಂದರು.
ಸಂಚಾಲಕ ಚಳ್ಳಕೆರೆ ಬಸವರಾಜ್ ಮಾತನಾಡಿ, ಭೂಮಿಯ ರಕ್ಷಣೆ ನಮ್ಮ ಹೊಣೆ ಕಾರ್ಯಕ್ರಮದ ಮೂಲಕ ಕೃಷಿಕರಲ್ಲಿ ಭೂಮಿ ಸತ್ವ ಕಾಪಾಡಿಕೊಳ್ಳುವಂತೆ, ಬಹುಬೆಳೆ ಪದ್ಧತಿ ಅಳವಡಿಕೊಳ್ಳುವಂತೆ ಜಾಗೃತಿ ಮೂಡಿಸಲು ತಾಲೂಕು, ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ. ಜತೆಗೆ ಕೆರೆ-ಕಟ್ಟೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ನಡೆಸಲಾಗುವುದು ಎಂದರು.
ಯೋಜನೆ ಜಾರಿ ಹಿನ್ನೆಲೆಯಲ್ಲಿ ಮಲೆನಾಡು ಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಕಾಡು ನಾಶವಾಗಲಿದ್ದು, ಅದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಮರ-ಗಿಡ ಬೆಳೆಸುವ ಹೊಣೆಗಾರಿಕೆ ನಮ್ಮ ಜಿಲ್ಲೆಯ ಜನರ ಮೇಲಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಸಂಘ-ಸಂಸ್ಥೆ, ಪರಿಸರ ಪ್ರೇಮಿಗಳ ಸಹಕಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ರೈತಸಂಪರ್ಕ ಕೇಂದ್ರದ ಸಹಕಾರದಲ್ಲಿ ಕೃಷಿಕರಲ್ಲಿ ನೀರಾವರಿ ಯೋಜನೆ ಸದ್ಬಳಕೆ ಕುರಿತು ಹಾಗೂ ಬಹುಬೆಳೆ ಪದ್ಧತಿ ಅಳವಡಿಕೊಳ್ಳಲು, ಹುಣಸೆ, ತೆಂಗು ಇತರೆ ಬೆಳೆಯತ್ತಲೂ ಆಸಕ್ತಿ ತೋರುವಂತೆ ಜಾಗೃತಿ ಮೂಡಿಸಲಾಗುವುದು ಎಂದರು.
ಮುಖ್ಯವಾಗಿ ದೊಡ್ಡ ನಗರದಲ್ಲಿನ ಶ್ರೀಮಂತರು ಜಿಲ್ಲೆಯ ಭೂಮಿ ಮೇಲೆ ಕಣ್ಣಿದ್ದು, ದುಬಾರಿ ಬೆಲೆ ಆಸೆ ತೋರಿಸಿ ಜಮೀನು ಖರೀದಿ ಮಾಡುವ ಜಾಲ ಆರಂಭವಾಗಿದೆ. ಆದ್ದರಿಂದ ಭೂಮಿ ಮಾರಾಟ ಮಾಡದಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಹೋರಾಟ ಸಮಿತಿ ಅಸ್ಥಿತ್ವಕ್ಕೆ ತರುವ ಸಂದರ್ಭ ಬಯಲುಸೀಮೆ ಪ್ರದೇಶದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟಿ, ಪರಿಸರ ಸಮತೋಲನ ಕಾಯ್ದುಕೊಳ್ಳುವ ಪ್ರತಿಜ್ಞೆ ಮಾಡಿದ್ದೆವು. ಆದ್ದರಿಂದ ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳ ಮೂಲಕ ಗೋಮಾಳ, ಶಾಲಾ-ಕಾಲೇಜು, ಸರ್ಕಾರಿ ಖಾಲಿ ಜಾಗ ಹೀಗೆ ಅನೇಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವಂತೆ ಒತ್ತಡ ತರುವುದು. ಬಯಲುಸೀಮೆ ಪ್ರದೇಶದವನ್ನು ಮಲೆನಾಡನ್ನಾಗಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸಂಚಾಲಕ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ, ಮುಖ್ಯವಾಗಿ ಬಯಲುಸೀಮೆ ಜಲಪಾತ್ರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಜವಾಬ್ದಾರಿ ಇದೆ. ಕೆರೆ, ಕಟ್ಟೆಗಳನ್ನು ಭದ್ರಪಡಿಸಬೇಕು, ಒತ್ತುವರಿ ತೆರವುಗೊಳಿಸಬೇಕು. ಹೂಳು ತೆಗೆಸಬೇಕು. ಕೆರೆ ಸುತ್ತಲ ಪ್ರದೇಶವನ್ನು ಉದ್ಯಾನವನ, ವಾಕಿಂಗ್ ಪಾತ್ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ರೂಪಿಸಲಾಗುವುದು. ಶಾಸಕರು, ಸಚಿವರು, ಸಂಸದರಿಗೆ ಮೊದಲ ಹಂತದಲ್ಲಿ ಮನವಿ ಸಲ್ಲಿಸಲಾಗುವುದು ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟು ಹೋಗಿರುವ ಮೊಳಕಾಲ್ಮೂರು ಸೇರಿ ಜಿಲ್ಲೆಗೆ ಸಮಗ್ರ ನೀರಾವರಿ ಕಲ್ಪಿಸುವಂತೆ ಒತ್ತಡ ತರುವ ಹೊಣೆಗಾರಿಕೆ ಹೋರಾಟ ಸಮಿತಿ ಮೇಲಿದೆ ಎಂದು ಹೇಳಿದರು.
ತಾಲೂಕು, ಹೋಬಳಿ ಹಾಗೂ ಪ್ರಮುಖ ಕೇಂದ್ರಗಳಲ್ಲಿ ಯೋಜನೆ ಜಾರಿ, ಕೃಷಿ ಸೇರಿ ರೈತರ ಹಿತಾಸಕ್ತಿಗೆ ಪೂರಕವಾಗಿ ವಿವಿಧ ವಿಷಯಗಳ ಕುರಿತು ವಿಚಾರಸಂಕೀರಣ ಆಯೋಜಿಸಲಾಗುವುದು ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಜಾರಿಯಲ್ಲಿ ತಮ್ಮ ತಮ್ಮ ಕಾಲಘಟ್ಟದಲ್ಲಿ ಹಲವು ಮುಖ್ಯಮಂತ್ರಿಗಳು, ನೀರಾವರಿ ಮಂತ್ರಿಗಳು ಶ್ರಮಿಸಿದ್ದಾರೆ. ಅವರ ಸಹಕಾರ ಸ್ಮರಿಸುವ ಜೊತೆಗೆ ಯೋಜನೆ ಪೂರ್ಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಂದಿನ ಕಾರ್ಯಕ್ರಮಕ್ಕೆ ಹಾಲಿ-ಮಾಜಿ ಮುಖ್ಯಮಂತ್ರಿ, ನೀರಾವರಿ ಸಚಿವರನ್ನು ಸಾಧ್ಯವಾದಷ್ಟು ಆಹ್ವಾನಿಸಲಾಗುವುದು ಎಂದರು.
ಜತೆಗೆ ಯೋಜನೆ ಜಾರಿಗೆ ಶ್ರಮಿಸಿದ, ಹೋರಾಟ ಸಮಿತಿಗೆ ಬೆನ್ನೆಲುಬು ಆಗಿ ನಿಂತ ಜಿಲ್ಲೆಯ ರಾಜಕಾರಣಿಗಳು, ಮಠಾಧೀಶರು, ರೈತ, ಕಾರ್ಮಿಕ, ಕನ್ನಡಪರ ಸೇರಿದಂತೆ ಎಲ್ಲ ಸಂಘಟನೆಗಳ ಮುಖಂಡರನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.
ಸಂಚಾಲಕ ಜೋಗಿಮಟ್ಟಿ ಈ.ಮಹೇಶ್‍ಬಾಬು ಮಾತನಾಡಿ, ಹೋರಾಟದ ಪ್ರಮುಖ ಭಾಗವಾಗಿ ಜಿಲ್ಲಾದ್ಯಂತ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕೆರೆ-ಕಟ್ಟೆಗಳ ನಿರ್ಮಿಸಿದ ಶ್ರೀ ಗುರುತಿಪ್ಪೇರುದ್ರಸ್ವಾಮಿ, ವಿವಿ ಸಾಗರ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪಮ್ಮ, ಬಿಚ್ಚುಗತ್ತಿ ಭರಮಣ್ಣ ನಾಯಕರ ಭಾವಚಿತ್ರಗಳೊಂದಿಗೆ ಜಾಥಾ ನಡೆಸಲಾಗುವುದು. ಹಿರಿಯೂರಲ್ಲಿ ಆರಂಭಿಸಿ, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಮೂಲಕ ನಾಯಕನಹಟ್ಟಿಗೆ ತೆರಳಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಭದ್ರಾ ಕಾಮಗಾರಿ, ಅದರಲ್ಲೂ ಮುಖ್ಯವಾಗಿ ಮೊದಲ ಹಂತದ ಕಾಮಗಾರಿ ಸ್ಥಳಕ್ಕೆ ಆಸಕ್ತ ಪತ್ರಕರ್ತರನ್ನೊಳಗೊಂಡ ತಂಡ ಭೇಟಿ ನೀಡಿ, ಸ್ಪಷ್ಟ ಚಿತ್ರಣ ಪಡೆಯಲಾಗುವುದು ಎಂದು ಹೇಳಿದರು.
ಸಂಚಾಲಕರಾದ ಟಿ.ಶಿವಪ್ರಕಾಶ್, ಕೂನಿಕೆರೆ ರಾಮಣ್ಣ ಇದ್ದರು.