ಚಿತ್ರದುರ್ಗ | ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಭೇಟಿ :  ಕುಂದುಕೊರತೆಗಳ ಶೀಘ್ರ ನಿವಾರಣೆಗೆ ತಾಕೀತು

1 Min Read

 

ಚಿತ್ರದುರ್ಗ ಜ. 06 : ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಭೇಟಿ ಮಾಡಿ, ಪರಿಶೀಲನೆ ನಡೆಸಿದರು.  ಕ್ರೀಡಾಂಗಣದಲ್ಲಿರುವ ಕುಂದುಕೊರತೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

ಜಿಲ್ಲಾ ಕ್ರೀಡಾಂಗಣಕ್ಕೆ ಶುಕ್ರವಾರ  ಸಂಜೆ ವೇಳೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಇಲ್ಲಿಗೆ ವಾಯು ವಿಹಾರಕ್ಕೆ, ವಾಕಿಂಗ್ ಹಾಗೂ ವಿವಿಧ ಕ್ರೀಡೆಗಳ ಅಭ್ಯಾಸಕ್ಕೆಂದು ಬಂದಿದ್ದವರನ್ನು ಮಾತನಾಡಿಸಿ, ಕ್ರೀಡಾಂಗಣದಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕ್ರೀಡಾಂಗಣದಲ್ಲಿ ವಿದ್ಯುತ್ ದೀಪದ ಕೊರತೆ ಹಾಗೂ ಕುಡಿಯುವ ನೀರಿನ ಕೊರತೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು,  ಎರಡು ದಿನಗಳ ಒಳಗೆ ವಿದ್ಯುತ್ ದೀಪದ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದರು. ಅಲ್ಲದೆ ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಕ್ಕಾಗಿ ತಾಕೀತು ಮಾಡಿದರು.  ಕ್ರೀಡಾಂಗಣದಲ್ಲಿ ಬೆಳಗಿನ ಜಾವ ಹಾಗೂ ಸಂಜೆಯ ಹೊತ್ತಿನಲ್ಲಿ ವಾಕಿಂಗ್ ಗಾಗಿ ಬರುವವರ ಸಂಖ್ಯೆ ಹೆಚ್ಚಿದೆ.  ಹೀಗಾಗಿ ವಾಕಿಂಗ್ ಮಾಡುವವರಿಗಾಗಿ ಪ್ರತ್ಯೇಕವಾಗಿ ವಾಕಿಂಗ್ ಪಥ ನಿರ್ಮಿಸಲು ಸೂಚನೆ ನೀಡಿದರು.

ವಿವಿಧ ಕ್ರೀಡೆಗಳ ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಬಂದಿದ್ದ ಯುವಜನರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಹಾಗೂ ಕ್ರೀಡೆಗಳ ಅಭಿವೃದ್ದಿಗೆ ಅಗತ್ಯವಿರುವ ಕ್ರೀಡಾ ಪರಿಕರಗಳ ಬಗ್ಗೆಯೂ ಅವರಿಂದ ಮಾಹಿತಿ ಪಡೆದುಕೊಂಡು, ಕ್ರೀಡಾಂಗಣಕ್ಕೆ ಅಗತ್ಯವಿರುವ ಪರಿಕರಗಳನ್ನು ಖರೀದಿಸುವಂತೆ ಹಾಗೂ ಅಗತ್ಯವಿರುವ ಅನುದಾನದ ಬಗ್ಗೆ ವರದಿ ಸಲ್ಲಿಸಲು ಸೂಚನೆ ನೀಡಿದರು.

ಬಳಿಕ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಈಜುಕೊಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಈಜುಕೊಳ ಸಾರ್ವಜನಿಕರ ಸೇವೆಗೆ ಶೀಘ್ರ ಲಭ್ಯವಾಗುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ವಿನಾಕಾರಣ ನೆಪಗಳನ್ನು ಹೇಳಿಕೊಂಡು ತಡ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿ.ಪಂ. ಸಿಇಒ ಸೋಮಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನ ನೆಲವಿಗಿ ಸೇರಿದಂತೆ ಕ್ರೀಡಾಂಗಣದ ವಿವಿಧ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *