ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 : ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ತೋಟಗಾರಿಕಾ ಇಲಾಖೆ ಆವರಣದಲ್ಲಿರುವ ಮರಗಳ ಉಳಿವಿಗಾಗಿ ಏ.6 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ವಾದಿ ಡಾ.ಹೆಚ್.ಕೆ.ಎಸ್.ಸ್ವಾಮಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜ್ಞಾನ ಕಾಲೇಜು ಆವರಣದಲ್ಲಿ ಸುಮಾರು ಇನ್ನೂರು ಗಿಡ-ಮರಗಳನ್ನು ಕಡಿದು ಮಹಿಳಾ ಕಾಲೇಜು ಹಾಗೂ ತೋಟಗಾರಿಕಾ ಇಲಾಖೆ ಆವರಣದಲ್ಲಿರುವ ಎರಡು ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದು ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಮೊದಲೆ ಬಯಲುಸೀಮೆ ಚಿತ್ರದುರ್ಗದಲ್ಲಿ ಹವಾಮಾನ ವೈಪರೀತ್ಯದಿಂದ ಜನ ಜಾನುವಾರು ಪಕ್ಷಿಗಳು ತತ್ತರಿಸುತ್ತಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಇರುವ ಗಿಡ-ಮರಗಳನ್ನು ಉಳಿಸಿಕೊಳ್ಳಬೇಕೆ ವಿನಃ ಕಡಿಯಬಾರದು ಎಂದು ಒತ್ತಾಯಿಸಿದರು.
ಮರಗಳನ್ನು ಕಡಿಯಲು ಹೊರಟಿರುವುದರ ವಿರುದ್ದ ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಒರಗಿಕೊಂಡಿದ್ದ ಮರವೊಂದಿದೆ. ವಿದ್ಯಾರ್ಥಿಗಳು ನೀರುಣಿಸಿ ಬೆಳೆಸಿರುವ ಮರಗಳ ಮಾರಣ ಹೋಮವಾಗಲು ನಾವುಗಳು ಬಿಡುವುದಿಲ್ಲ. ಚಿತ್ರದುರ್ಗದಲ್ಲಿ ಪರಿಸರವಾದಿಗಳಿರುವುದರಿಂದ ಅಲ್ಪಸ್ವಲ್ಪ ಮರಗಳಾದರೂ ಉಳಿದುಕೊಂಡಿವೆ. ಅವುಗಳನ್ನು ಕಡಿಯಬಾರದೆಂದರು.
ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡಿ ಜಿಲ್ಲೆಯಲ್ಲಿ ಶೇ.33 ರಷ್ಟು ಅರಣ್ಯ ಪ್ರದೇಶವಿರಬೇಕು. ಕೇವಲ 22 ಪಸೆಂಟ್ನಷ್ಟಿದೆ. ಅಭಿವೃದ್ದಿಯೆಂದರೆ ಕಟ್ಟಡಗಳನ್ನು ಕಟ್ಟುವುದಲ್ಲ. ಜಿಲ್ಲೆಯಲ್ಲಿ ಅಕಾಲಿಕ ಮಳೆಯಿರುವುದರಿಂದ ಜಾಗತಿಕ ತಾಪಮಾನವಿದೆ. ನಾಗರೀಕರ ಹಾಗೂ ಪರಿಸರ ಪ್ರೇಮಿಗಳ ಅಭಿಪ್ರಾಯ ಕೇಳದೆ ಅಧಿಕಾರಿಗಳು ಮರಗಳನ್ನು ಕಡಿಯಲು ಅನುಮತಿ ಕೊಟ್ಟಿರುವುದು ಯಾವ ನ್ಯಾಯ? ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ. ಇದೆ ರೀತಿ ಮರ-ಗಿಡಗಳನ್ನು ಕಡಿದರೆ ಮುಂದಿನ ಪೀಳಿಗೆಗೆ ಪರಿಸರವೇ ಇರುವುದಿಲ್ಲ. ಎಲ್ಲವನ್ನು ನಿರ್ನಾಮ ಮಾಡಲು ಹೊರಟಿರುವವರ ವಿರುದ್ದ ಯಾವ ರೀತಿಯ ಹೋರಾಟ ತ್ಯಾಗಕ್ಕೂ ಸಿದ್ದರಿದ್ದೇವೆಂದು ಎಚ್ಚರಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ರಸ್ತೆ ಅಗಲೀಕರಣ ನೆಪದಲ್ಲಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿಕೊಂಡು ಚಿತ್ರದುರ್ಗವನ್ನು ಬಯಲುಸೀಮೆಯನ್ನಾಗಿಸಿದ್ದಾರೆ. ತೋಟಗಾರಿಕೆ ಇಲಾಖೆ ಹಾಗೂ ವಿಜ್ಞಾನ ಕಾಲೇಜು ಆವರಣ ವಯೋವೃದ್ದರು, ಮಹಿಳೆಯರು, ಮಕ್ಕಳ ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತಿದೆ. ಇಂತಹ ಸನ್ನಿವೇಶದಲ್ಲಿ ಇರುವ ಗಿಡ-ಮರಗಳನ್ನು ಕಡಿದು ನಾಶಪಡಿಸಿದರೆ ಪರಿಸರಕ್ಕೆ ಏನು ಕೊಡುಗೆ ಕೊಟ್ಟಂತಾಗುತ್ತದೆಂದು ಪ್ರಶ್ನಿಸಿದರು?
ಜಿಲ್ಲಾ ತೋಟಗಾರಿಕೆ ಇಲಾಖೆ ಸಂಘದ ಖಜಾಂಚಿ ನಾಗರಾಜ್ಬೇದ್ರೆ ಮಾತನಾಡುತ್ತ ಸಕಾಲಕ್ಕೆ ಮಳೆಯಿಲ್ಲದೆ ಚಿತ್ರದುರ್ಗ ನಗರದಲ್ಲಿ ತಾಪಮಾನ ಜಾಸ್ತಿಯಾಗಿರುವುದರಿಂದ ಸಕಲ ಜೀವರಾಶಿಗಳು ಬಿಸಿಲಿಗೆ ಚಡಪಡಿಸುವಂತಾಗಿದೆ. ಇದರಿಂದ ಜೀವ ಜಂತುಗಳಿಗೆ ಹಾನಿಯಾಗುತ್ತಿದೆ. ವರ್ಷಕ್ಕೊಮ್ಮೆ ಫಲಪುಷ್ಪ ಪ್ರದರ್ಶನಗೊಳ್ಳುವ ತೋಟಗಾರಿಕೆ ಇಲಾಖೆಯಲ್ಲಿ ಮರ-ಗಿಡಗಳನ್ನು ಕಡಿದು ಪ್ರಕೃತಿ ನಾಶಪಡಿಸುತ್ತಿರುವುದರ ವಿರುದ್ದ ನಡೆಯುವ ಸತ್ಯಾಗ್ರಹದಲ್ಲಿ ಸಮಸ್ತ ನಾಗರೀಕರು ಹಾಗೂ ಪರಿಸರ ಪ್ರೇಮಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಡಾ.ಮಧು ಮಾತನಾಡಿ ತೋಟಗಾರಿಕೆ ಇಲಾಖೆ ಹಾಗೂ ವಿಜ್ಞಾನ ಕಾಲೇಜು ಆವರಣದಲ್ಲಿರುವ ಮರಗಳನ್ನು ಕಡಿದರೆ ಉಸಿರಾಟಕ್ಕೆ ಶುದ್ದವಾದ ಗಾಳಿಯಿಲ್ಲದಂತಾಗುತ್ತದೆ.
ಅದಕ್ಕಾಗಿ ಸರ್ಕಾರದ ಕಿವಿ ಹಿಂಡುವ ಕೆಲಸವಾಗಬೇಕಾಗಿರುವುದರಿಂದ ಪ್ರತಿಯೊಬ್ಬರು ನಮ್ಮ ಧರಣಿ ಸತ್ಯಾಗ್ರಹಕ್ಕೆ ಕೈಜೋಡಿಸಿ ಪ್ರಕೃತಿಯನ್ನು ಸಂರಕ್ಷಿಸುವಂತೆ ವಿನಂತಿಸಿದರು. ಮಂಜುನಾಥ್ ಕಳ್ಳಿಹಟ್ಟಿ ಮಾತನಾಡುತ್ತ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಹಿಳಾ ಕಾಲೇಜು ನಿರ್ಮಿಸುವುದಕ್ಕಾಗಿ ಇರುವ ಮರಗಳನ್ನು ಕಡಿದರೆ ಮುಂದೆ ಗತಿ ಏನು? ವಾತಾವರಣ ಕಲುಷಿತಗೊಂಡರೆ ಹೇಗೆ? ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿಲುವನ್ನು ವಿರೋಧಿಸಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಮರ ಕಡಿಯುವುದು, ಕಲ್ಲು ಮಣ್ಣು ದೋಚುವುದೇ ದಂಧೆಯಾಗಿದೆ. ಪ್ರಶ್ನಿಸುವ ಗುಣ ಎಲ್ಲರೂ ಬೆಳೆಸಿಕೊಳ್ಳಬೇಕೆಂದರು. ಪದ್ಮ ಇನ್ನು ಅನೇಕರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.




















