ಸುದ್ದಿಒನ್ ಡೆಸ್ಕ್
ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಕಬ್ಜ. ಉಪೇಂದ್ರ, ಸುದೀಪ್, ಶಿವ ರಾಜ್‍ಕುಮಾರ್, ಶ್ರೀಯಾ ಶರಣ್ ಅಭಿನಯಿಸಿರುವ ಕಬ್ಜ ಇಂದು ಏಳು ಭಾಷೆಯಲ್ಲಿ ತೆರೆಕಂಡಿದೆ. ಬಹಳಷ್ಟು ಕಾತುರದಿಂದ ಕಾಯುತ್ತಿದ್ದ ದಿನಕ್ಕಿಂದು ತೆರೆಬಿದ್ದಿದೆ. ಸಿನಿಮಾವನ್ನು ನೋಡಿದವರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ. ಅಟ್ ದಿ ಸೇಮ್ ಟೈಮ್ ಸಿನಿಮಾದಲ್ಲಿ ಉಪೇಂದ್ರ ಮತ್ತು ಶ್ರೀಯಾಗಿರುವ ಇಬ್ಬರು ಮುದ್ದಾದ ಮಕ್ಕಳ ಬಗ್ಗೆ ಎಲ್ಲೆಡೆಯೂ ಚರ್ಚೆ. ಯಾರು ಈ ಮುದ್ದಾದ ಮಕ್ಕಳು, ಎಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ಸಿನಿಮಾದಲ್ಲಿ ಎರಡು ಪುಟಾಣಿ ಮಕ್ಕಳ ನಟನೆ ಚಿತ್ರದ ಪ್ರಮುಖ ಆಕರ್ಷಣೆ. ಅಮ್ಮನ ಕೈಯಿಡಿದು ನಡೆದು ಬರುವುದೇನು, ಕಾರಲ್ಲಿ ಕೂರುವುದೇನು, ಅಜ್ಜನನ್ನು ಕಂಡು ಹೆದರುವುದೇನು, ಅಮ್ಮನ ಮಡಿಲಲ್ಲಿ ಮಲಗಿ ನಗುವುದೇನು, ಅಮ್ಮನಿಂದ ದೂರಾದಾಗ ಅಳುವುದೇನು, ಬೆಂಕಿ ಬಿದ್ದಾಗ ಕಿರುಚುದುವುದೇನು. ಅಬ್ಬಬ್ಬಾ ಈ ಮುದ್ದು ಮಕ್ಕಳ ನಟನೆ ಎಂಥವರನ್ನೂ ಮೂಖವಿಸ್ಮಿತರನ್ನಾಗಿಸುತ್ತದೆ. ಹೀಗಾಗಿ ಈ ಮಕ್ಕಳು ಯಾರು ? ಎಲ್ಲಿಯವರು ? ಎಷ್ಟು ವರ್ಷದಿಂದ ಸಿನಿಮಾ ಫೀಲ್ಡ್ ನಲ್ಲಿದ್ದಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಎಲ್ಲೆಡೆಯೂ ಚರ್ಚೆ ಶುರುವಾಗಿದೆ.
ಈ ಮುದ್ದಾದ ಅವಳಿ ಮಕ್ಕಳು ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿರುವ ಶ್ರೀ ರಾಮ ಮೆಡಿಕಲ್ ಎಂಪೋರಿಯಂ ನ ಮಾಲೀಕರಾದ ಮಂಜುನಾಥ ಅವರ ಮೊಮ್ಮಕ್ಕಳು.
ಈ ಕುರಿತು ಅವಳಿ ಮಕ್ಕಳ ತಂದೆ ವೈಶಾಖ್
ಸುದ್ದಿಒನ್ ನೊಂದಿಗೆ ಮಾತನಾಡಿ,
ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದು ಹೀಗೆ, “ನನ್ನ ಇಬ್ಬರು ಅವಳಿ ಜವಳಿ ಮಕ್ಕಳಿಗೆ ನಾಲ್ಕು ವರ್ಷ.ಅವರ ಹೆಸರು ಅಗಸ್ತ್ಯ ಮತ್ತು ಅಚಿಂತ್ಯ. ನನ್ನ ಪತ್ನಿ ಪ್ರೀತಿಗೆ ಮಕ್ಕಳನ್ನು ಕಲಾವಿದರನ್ನಾಗಿ ಮಾಡುವ ಆಸೆ. ಆಕೆ ಕೂಡ ಡ್ಯಾನ್ಸರ್. ಅವರಿಗೆ ಕಲೆಯಲ್ಲಿ ಆಸಕ್ತಿಯಿದೆ. ಹೀಗಾಗಿ ಮಕ್ಕಳಿಗೆ ನನ್ನ ಮಡದಿಯೇ ಮೊದಲ ಗುರು.
ಕಬ್ಜ ಚಿತ್ರದಲ್ಲಿ ಪುಟಾಣಿ ಮಕ್ಕಳು ಬೇಕಾಗಿದ್ದಾರೆ ಎಂದು ಚಿತ್ರ ತಂಡ ಪ್ರಕಟಣೆ ನೋಡಿ ನಾವೂ ಅಪ್ಲೈ ಮಾಡಿದ್ದೆವು. ಒಮ್ಮೆ ಬೆಂಗಳೂರಿಗೆ ಕರೆದರು. ಹೋಗಿ ಆಡಿಷನ್ ಕೊಟ್ಟೆವು. ಮಕ್ಕಳಿಗೆ ಒಂದು ಡೈಲಾಗ್ ಕೊಟ್ಟರು. ನಿರರ್ಗಳವಾಗಿ ಹೇಳಿದಾಗ ಸೆಲೆಕ್ಟ್ ಆದರು. ಶೂಟಿಂಗ್ ಸೆಟ್ ಗೆ ಕರೆದುಕೊಂಡು ಹೋದಾಗಲೂ ಫುಲ್ ಆಕ್ಟೀವ್ ಆಗಿದ್ದರು. ಎಲ್ಲರ ಜೊತೆಗೂ ಮಾತನಾಡುತ್ತಾ ಇದ್ರು. ಆರಂಭದಲ್ಲಿ ರಿಟೇಕ್ ತಗೊಂಡ್ರು. ಆದ್ರೆ ಆಮೇಲೆ ಆಮೇಲೆ ಒಂದೇ ಟೇಕ್ ನಲ್ಲಿ ಮುಗಿಸಿ, ಎಲ್ಲರಿಂದ ಶಹಬ್ಬಾಶ್ ಎನಿಸಿಕೊಂಡಿದ್ದಾರೆ. ಮಕ್ಕಳಿಗೆ ಕಲೆಯಲ್ಲಿ ಭವಿಷ್ಯವಿದೆ ಎಂದು ಎಲ್ಲರೂ ಹರಸಿದ್ದಾರೆ” ಎಂದು ಮಕ್ಕಳ ತಂದೆ ಮತ್ತು ತಾಯಿ ಹೆಮ್ಮೆಯಿಂದ ಸಂಭ್ರಮ ಹಂಚಿಕೊಂಡರು.
ಸಿನೆಮಾದಲ್ಲಿ ಮಕ್ಕಳ ಅಭಿನಯ ನೋಡಿ ನಮ್ಮ ಕುಟುಂಬದ ಸದಸ್ಯರು, ಸಂಬಂಧಿಕರು, ಸ್ನೇಹಿತರು ಸೇರಿದಂತೆ ನಮ್ಮ ಅಂಗಡಿಯ (ಶ್ರೀ ರಾಮ ಮೆಡಿಕಲ್ ಎಂಪೋರಿಯಂ) ಗ್ರಾಹಕರು ಕರೆ ಮಾಡಿ, ಮಕ್ಕಳಿಬ್ಬರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅವರಿಗೆ ಅಷ್ಟು ಚೆನ್ನಾಗಿ ನಟಿಸಲು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯಕರವಾಗಿ ಮಾತನಾಡುತ್ತಾರೆ. ಮತ್ತೆ ಕೆಲವರು ಕರೆ ಮಾಡಿ ನಮ್ಮೂರಿನ ಮಕ್ಕಳು ನಮ್ಮ ಮನೆಯ ಮಕ್ಕಳು ಪಾನ್ ಇಂಡಿಯಾ ಚಿತ್ರದಲ್ಲಿ ನಟಿಸಿರುವುದೇ ನಮ್ಮ ಸೌಭಾಗ್ಯ ಎಂದು ಸಂತಸವನ್ನು ಹಂಚಿಕೊಳ್ಳುತ್ತಾರೆ. ಅವರೆಲ್ಲರ ಮೆಚ್ಚುಗೆಯ ಮಾತುಗಳಿಂದ ನಮಗೆ ತುಂಬಾ ಸಂತಸವಾಗಿದೆ, ಹೆಮ್ಮೆಯನಿಸುತ್ತಿದೆ ಎಂದು ಹೇಳುತ್ತಾ ವೈಶಾಖ್ ಅವರು ಮಾತು ಮುಗಿಸಿದರು.