ಸುದ್ದಿಒನ್ : ಚಿತ್ರದುರ್ಗ, ಏಪ್ರಿಲ್. 03 : ಈ ವರ್ಷ ಫೆಬ್ರವರಿಯಿಂದಲೇ ಆರಂಭವಾದ ಬೇಸಿಗೆಯ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನತೆಗೆ ಹೊಸ ವರ್ಷದ ಮೊದಲ ಮಳೆಯಾಗಿದೆ.

ಬೆಳಿಗ್ಗೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗಿತ್ತು, ಮಧ್ಯಾನದ ವೇಳೆಗೆ ಮೋಡ ಆವರಿಸಿದ ವಾತಾವರಣ ಇತ್ತು. ಮಧ್ಯಾನ್ಹ 1:30 ರ ವೇಳೆಗೆ ಸಣ್ಣಗೆ ಆರಂಭವಾದ ಮಳೆ ಕ್ರಮೇಣ ಜೋರಾಗಿ ಮಿಂಚು ಗುಡುಗು ಸಮೇತ ಮುಂಗಾರು ಪೂರ್ವ ಮಳೆ ಹದವಾಗಿ ಸುರಿಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಇಳೆಗೆ ತಂಪೆರೆಯಿತು. ಇದರಿಂದ ಆರಂಭದಲ್ಲಿಯೇ ಉತ್ತಮ ಮಳೆ ಸುರಿದಿದ್ದು ಈ ಬಾರಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಯುಗಾದಿ ಹಬ್ಬ ಮುಗಿದ ಬಳಿಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹದವಾದ ಮಳೆಯಾಗಿದೆ.

ನಿನ್ನೆ ಕೂಡಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೊಡಕವಿದ ವಾತಾವರಣ ನಿರ್ಮಾಣವಾಗಿತ್ತು. ಬುಧವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ. ಜಿಲ್ಲೆಯಲ್ಲಿ ನಾಲ್ಕೈದು ದಿನ ಉತ್ತಮ ಮಳೆ ಬಂದರೆ ರೈತರ ಕೃಷಿ ಚುಟುಕುಗಳು ಗರಿಗೆದಲಿವೆ. ರೈತರು ಭೂಮಿಯನ್ನು ಹಸನುಗೊಳಿಸಿ ಬಿತ್ತನೆಗೆ ತಯಾರಿ ನಡೆಸಿಕೊಳ್ಳಲಿದ್ದಾರೆ.
ರಾಜ್ಯದ ಮಳೆ ಮಾಹಿತಿ :
ಇಂದು ಬೆಳಗ್ಗೆಯಿಂದಾನೇ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣ ಮನೆ ಮಾಡಿತ್ತು. ಅದರ ಪರಿಣಾಮ ಸಂಜೆ ವೇಳೆಗೆ ಎಲ್ಲೆಡೆ ಮಳೆಯಾಗಿದೆ. ಬೆಂಗಳೂರಿನಲ್ಲಂತೂ ಬೆಳಗ್ಗೆಯೇ ಸ್ವಲ್ಪ ಮಳೆರಾಯನ ಸಿಂಚನವಾಗಿತ್ತು. ಮಧ್ಯಾಹ್ನದ ವೇಳೆಗೆ ಇನ್ನು ಜಾಸ್ತಿ ಮಳೆಯಾಗಿತ್ತು. ಇಂದು ರಾತ್ರಿ ವೇಳೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೂ ಮಳೆಯಾಗುವ ಸಾಧ್ಯತೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಹಲವು ಭಾಗ ಅಂದ್ರೆ ಯಶವಂತಪುರ, ಮಲ್ಲೇಶ್ವರಂ, ಕೋರಮಂಗಲ, ಹೆಚ್ಎಎಲ್ ಏರ್ಪೋರ್ಟ್, ಮಾರತ್ತಳ್ಳಿ, ಮೆಜೆಸ್ಟಿಕ್, ಶೇಷಾದ್ರಿಪುರಂ ಸೇರಿದಂತೆ ಹಲವು ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಸಂಜೆ ವೇಳೆಗೂ ಬೆಂಗಳೂರಿನಲ್ಲಿ ರಣಮಳೆ ಮುಂದುವರೆಯಲಿದೆ ಎಂದೇ ಹೇಳಲಾಗಿದೆ. ಇಂದು ರಾತ್ರಿ ವೇಳೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ವದಕ್ಷಿಣ ಕನ್ನಡ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ತುಮಕೂರು, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ರಾಜ್ಯದಾದ್ಯಂತ ಅಲ್ಲಲ್ಲಿ ಮೋಡ ಕವಿದ ವಾತಾವರಣದೊಂದಿಗೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 30-60 ಕಿಮೀ ತಲುಪುವ ಸಾದ್ಯತೆಯಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮತ್ತು ಅತಿ ಭಾರಿ ಮಳೆ. ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಹೀಗಾಗಿ ಹೊರಗೆ ಹೋಗುವವರು, ಹೊರಗೆ ಹೋಗಿರುವವರು ಎಚ್ಚರದಿಂದ ಇರಬೇಕಾಗಿದೆ.

