ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.06): ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಕೆ.ಸಿ.ವೀರೇಂದ್ರ ಪಪ್ಪಿರವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಘೋಷಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು.
ಮಧ್ಯಾಹ್ನ 3-30 ರ ಸುಮಾರಿಗೆ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿರವರನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಡಿ.ಸಿ.ಸಿ. ಬ್ಯಾಂಕ್ ಮುಂಭಾಗದಿಂದ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮೂಲಕ ಕಾಂಗ್ರೆಸ್ ಕಚೇರಿಗೆ ಕರೆತಂದರು. ರಸ್ತೆಯುದ್ದಕ್ಕೂ ಅಭಿಮಾನಿಗಳು ಹೂವಿನ ಮಳೆಗೆರೆದರು.
ಈ ಬಾರಿಯ ಚುನಾವಣೆಯಲ್ಲಿ ಆಶೀರ್ವದಿಸಿ ಗೆಲ್ಲಿಸುವಂತೆ ಅಭಿಮಾನಿಗಳು, ಕಾರ್ಯಕರ್ತರಲ್ಲಿ ಎರಡು ಕೈಮುಗಿದು ವೀರೇಂದ್ರಪಪ್ಪಿ ವಿನಂತಿಸಿದರು.
ಡೊಳ್ಳು, ತಮಟೆಯ ಸದ್ದಿಗೆ ಅಭಿಮಾನಿಗಳು ಹೆಜ್ಜೆ ಹಾಕಿದರು, ನೂರಾರು ಆಟೋ, ಅಪೆಗಾಡಿಗಳಲ್ಲಿ ಮಹಿಳೆಯರು ಬಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದರು. ಸುಡುಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ತಲೆ ಮೇಲೆ ಸೆರಗು ಹೊದ್ದುಕೊಂಡು ಕೆ.ಸಿ.ವೀರೇಂದ್ರಪಪ್ಪಿಗೆ ಜೈಕಾರಗಳನ್ನು ಕೂಗಿದರು. ಇನ್ನು ಕೆಲವು ಮಹಿಳೆಯರು ಸೊಂಟದಲ್ಲಿ ಚಿಕ್ಕ ಕೂಸುಗಳನ್ನು ಹೊತ್ತು ನಿಂತಿದ್ದರು.
ಒನಕೆ ಓಬವ್ವ ವೃತ್ತದ ನಾಲ್ಕು ಕಡೆಯೂ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಬಂದ್ ಆಗಿತ್ತು. ಒನಕೆ ಓಬವ್ವ, ಡಾ.ಬಿ.ಆರ್.ಅಂಬೇಡ್ಕರ್, ಮದಕರಿನಾಯಕನ ಪ್ರತಿಮೆ, ಸಂಗೊಳ್ಳಿರಾಯಣ್ಣ, ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್, ಮಹಡಿ ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಪರಮೇಶ್, ಬಿ.ಟಿ.ಜಗದೀಶ್, ಶ್ರೀರಾಮ್, ಮುನಿರಾ ಎ.ಮಕಾಂದಾರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಕೆ.ಸಿ.ವೀರೇಂದ್ರಪಪ್ಪಿಗೆ ಶುಭ ಕೋರಿದರು.