ಚಿತ್ರದುರ್ಗ : ವೈದ್ಯಕೀಯ ನಿರ್ಲಕ್ಷ್ಯಕ್ಕೆ 4.30 ಲಕ್ಷ ಪರಿಹಾರ ನೀಡಲು ವೈದ್ಯರಿಗೆ ಆಯೋಗ ಆದೇಶ…!

2 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 29 : ಪಿತ್ತಕೋಶದಲ್ಲಿ ಕಲ್ಲು ತೆಗೆಯುವಿಕೆ ಶಸ್ತ್ರಚಿಕಿತ್ಸೆ ವಿಫಲಗೊಂಡು ಜ್ಯಾಂಡಿಸ್ ಆಗಿ ಪರಿವರ್ತನೆಯಾಗಿ ರೋಗಿಗೆ ಉಂಟಾದ ಮಾನಸಿಕ ಹಿಂಸೆ, ನೋವು ಹಾಗೂ ದೂರು ಖರ್ಚು ಮತ್ತು ದಂಡ ಸೇರಿದಂತೆ ಒಟ್ಟು ಪರಿಹಾರದ ಮೊತ್ತ ರೂ.4,30,000/- ( ರೂ. ನಾಲ್ಕು ಲಕ್ಷದ ಮೂವತ್ತು ಸಾವಿರಗಳು) ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ನಗರದ ಕಿರಣ್ ಸರ್ಜಿಕಲ್ ಸೆಂಟರ್‌ನ ಡಾ. ಕಿರಣ್ ಕುಮಾರ್ ಅವರಿಗೆ ಸೂಚಿಸಿದೆ. ಏಪ್ರಿಲ್ 29ರಂದೇ ಈ ಆದೇಶ ಬಂದಿದ್ದು, 30 ದಿನಗಳ ಒಳಗಾಗಿ ಪರಿಹಾರ ಮೊತ್ತ ನೀಡಬೇಕು ಆಯೋಗ ಸೂಚಿಸಿದೆ.

ಘಟನೆ ಹಿನ್ನೆಲೆ :
ಮಧು ಎನ್ನುವವರು ದಿನಾಂಕ:29/06/2021ರಂದು ಡಾ.ಕಿರಣ್ ಕುಮಾರ್, ಕಿರಣ್ ಸರ್ಜಿಕಲ್ ಸೆಂಟರ್‌ನಲ್ಲಿ ಚಿತ್ರದುರ್ಗ ಇವರು ಪಿತ್ತ ಕೋಶದಲ್ಲಿ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ಮಾಡಿರುತ್ತಾರೆ. ಒಂದೆರಡು ದಿನಗಳ ನಂತರ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಜಾಂಡಿಸ್ ಪರಿವರ್ತನೆಯಾಗಿದೆ ನಂತರ ಅವರಿಗೆ 2-3 ದಿನಗಳ ಕಾಲ ಚಿಕಿತ್ಸೆ ನೀಡಿದರೂ, ಆರೋಗ್ಯ ಸುಧಾರಣೆಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ
ಡಾ.ಶಿವಕುಮಾರ್, ಸಹ್ಯಾದ್ರಿ ನಾರಾಯಣ ಹಾಸ್ಪಿಟಲ್, ಶಿವಮೊಗ್ಗ ಇಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.

ಮೊದಲ ಬಾರಿಗೆ ಮಾಡಲಾದ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:13/07/2021ರಂದು ಮತ್ತೊಮ್ಮೆ ಶಸ್ತ್ರ ಚಿಕಿತ್ಸೆಯನ್ನು ಸಾಕಷ್ಟು ಹಣವನ್ನು ಪಾವತಿಸಿ ಮಾಡಿಸಲಾಗಿರುತ್ತದೆ. ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಉಂಟಾದ ದೋಷವು ಡಾ.ಕಿರಣ್‌ ಕುಮಾರ್, ಕಿರಣ್ ಸರ್ಜಿಕಲ್ ಸೆಂಟರ್ ಕ್ಲಿನಿಕ್, ರವರು ಮಾಡಿದ ನಿರ್ಲಕ್ಷ್ಯತೆಯಾಗಿದೆ ಎಂದು ವೈದ್ಯಕೀಯ ಸೇವಾ ನಿರ್ಲಕ್ಷ್ಯಕ್ಕೆ ಪರಿಹಾರ ಕೋರಿ ಚಿತ್ರದುರ್ಗ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ರೋಗಿಯಾದ ಮಧು ಅವರು ದಿನಾಂಕ:07/12/2021ರಂದು ದೂರನ್ನು ನೀಡಿರುತ್ತಾರೆ.

ದೂರು ಸ್ವೀಕರಿಸಿದ ಆಯೋಗವು ದೂರುದಾರರು ಹಾಜರುಪಡಿಸಿದ ದಾಖಲೆಗಳು ಮತ್ತು ಎದುರುದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿ, ದಿನಾಂಕ: 29/06/2021ರಲ್ಲಿ ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗದ ಕಾರಣ 13/07/2021ರಂದು ಮತ್ತೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು, ಇದಕ್ಕೆ ಡಾ. ಕಿರಣ್ ಕುಮಾರ್ ಅವರ ನಿರ್ಲಕ್ಷ್ಯತೆಗೆ ಕಾರಣ ಎಂದು ಆಯೋಗವು ತೀರ್ಮಾನಿಸಿ ಕಿರಣ್ ಸರ್ಜಿಕಲ್ ಸೆಂಟರ್, ಚಿತ್ರದುರ್ಗ ಇಲ್ಲಿ ಪಿತ್ತಕೋಶದ ಶಸ್ತ್ರ ಚಿಕಿತ್ಸೆಗೆ ಖರ್ಚು ಮಾಡಿದ ವೆಚ್ಚ ರೂ.60,000/- ಮತ್ತು ನಾರಾಯಣ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ, ಶಿವಮೊಗ್ಗ ಇಲ್ಲಿ ಹೆಚ್ಚಿನ ಶಸ್ತ್ರ ಚಿಕಿತ್ಸೆಗೆ ಖರ್ಚು ಮಾಡಿದ ಮೊತ್ತ ರೂ.1,70,000/-ಗಳನ್ನು ಈ ದೂರು ಸಲ್ಲಿಸಿದ ದಿನಾಂಕದಿಂದ ಶೇಕಡಾ 8% ರಂತೆ ಬಡ್ಡಿಯೊಂದಿಗೆ ಹಾಗೂ ಸೇವಾ ನ್ಯೂನ್ಯತೆಗೆ, ಮಾನಸಿಕ ಹಿಂಸೆ, ದೂರು ಖರ್ಚು ಎಂದು ದಂಡದ ರೂಪವಾಗಿ ರೂ.2,00,000/-ಪರಿಹಾರವನ್ನು ಒಟ್ಟು ರೂ.4,30,000/-ಗಳನ್ನು 30 ದಿನಗಳಲ್ಲಿ ಪರಿಹಾರ ಮೊತ್ತವನ್ನು ನೀಡುವಂತೆ ಆದೇಶಿಸಿ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಕುಮಾರಿ ಹೆಚ್.ಎನ್. ಮೀನಾ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಹೆಚ್.ಯಶೋಧರವರು ಅದೇಶಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *