ಚಿತ್ರದುರ್ಗ, ಮಾರ್ಚ್, 28 : ಜಿಲ್ಲಾ ಕೇಂದ್ರದಲ್ಲಿ ಈ ಬಾರಿ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಗಳನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಬರುವ ಏಪ್ರಿಲ್ 05 ರಂದು ಡಾ.ಬಾಬು ಜಗಜೀವನರಾಂ ಅವರ 118ನೇ ಜನ್ಮ ದಿನಾಚರಣೆ ಹಾಗೂ ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಆಚರಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಹಾಗೂ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಉಭಯ ಮಹನೀಯರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಈ ಬಾರಿ ಮಹಾ ನಾಯಕರ ಜಯಂತಿಯನ್ನು ವಿಶೇಷ ರೀತಿಯಲ್ಲಿ ಹಾಗೂ ಮಾದರಿಯಾಗಿ ಆಚರಿಸಲು ಕ್ರಮ ವಹಿಸಲಾಗುವುದು. ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ತಪ್ಪದೆ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಸೂಚನೆ ನೀಡಲಾಗುವುದು. ಜಾತಿ ಬೇಧವಿಲ್ಲದೆ ಎಲ್ಲ ಸಮುದಾಯ, ಸಂಘಟನೆ, ಸಮಾಜದವರು ಉಭಯ ಮಹನೀಯರ ಜಯಂತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಏಪ್ರಿಲ್ 05ರಂದು ಡಾ.ಬಾಬು ಜಗಜೀವನರಾಂ ಅವರ 118ನೇ ಜನ್ಮ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9ಕ್ಕೆ ನಗರದ ನೀಲಕಂಠೇಶ್ವರ ದೇಗುಲದಿಂದ ಮೆರವಣಿಗೆಗೆ ಚಾಲನೆ ನೀಡಿ, ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಏಪ್ರಿಲ್ 14ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9ಕ್ಕೆ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಲಿದ್ದು, ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು, ವೈವಿಧ್ಯಮಯ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ನಗರದ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮಹನೀಯರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ ಗಾಯಕರಿಂದ ಕ್ರಾಂತಿಗೀತೆಗಳನ್ನು ಹಾಡಲು ಕ್ರಮವಹಿಸಲಾಗುವುದು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಏಪ್ರಿಲ್ 13ರಂದು ನಗರದ ಚಳ್ಳಕೆರೆ ರಸ್ತೆಯಿಂದ ಕನಕ ವೃತ್ತದವರೆಗೂ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಿ, ಹಬ್ಬದ ರೀತಿಯಲ್ಲಿ ನಗರವನ್ನು ಅಲಂಕರಿಸಿ, ಜಯಂತಿ ಆಚರಿಸಲಾಗುವುದು. ಸಮಾಜದ ಮುಖಂಡರ ಬೇಡಿಕೆಯಂತೆ ಹೋರಾಟಗಾರರಿಗೆ ಹಾಗೂ ರ್ಯಾಂಕ್ ಪಡೆದ, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗುವುದು. ಪ್ರತಿ ತಾಲ್ಲೂಕುಗಳಿಂದಲೂ ಪ್ರಶಸ್ತಿಗಾಗಿ ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿಯೇ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗುವುದು. ಸಮಿತಿ ನೀಡುವ ಶಿಫಾರಸ್ಸಿನಂತೆ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ವಿವಿಧ ಇಲಾಖೆಗಳಲ್ಲಿ ಜಾರಿಯಲ್ಲಿರುವ ಯೋಜನೆಗಳು, ಯೋಜನೆಯ ಸೌಲಭ್ಯ ಪಡೆಯಲು ಇರುವ ಮಾನದಂಡಗಳು, ನೀಡಬೇಕಿರುವ ದಾಖಲೆಗಳು ಮುಂತಾದ ಸಮಗ್ರ ವಿವರಗಳನ್ನು ಒಳಗೊಂಡಂತೆ ಕಿರುಹೊತ್ತಿಗೆಯನ್ನು ತಯಾರಿಸಿ ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಇದನ್ನು ಕೇವಲ ಜಯಂತಿ ಸಂದರ್ಭಕ್ಕಾಗಿ ಮಾತ್ರವಲ್ಲ, ಇತರೆ ಕಾರ್ಯಕ್ರಮಗಳಲ್ಲೂ ವಿತರಿಸಲು ಕ್ರಮ ವಹಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಿ, ಅಹವಾಲು ಸ್ವೀಕರಿಸಲಾಗುವುದು ಎಂದರು.
ಸಮಾಜದ ಮುಖಂಡರ ಸಲಹೆಗಳು: ಮಹನೀಯರ ಜಯಂತಿ ಅಂಗವಾಗಿ ಅರ್ಥಪೂರ್ಣವಾಗಿ ಜಯಂತಿ ಅಚರಿಸುವ ನಿಟ್ಟಿನಲ್ಲಿ ಸಮಾಜದ ಮುಖಂಡರು ಹಲವು ಸಲಹೆ-ಸೂಚನೆಗಳನ್ನು ನೀಡಿದರು.
ಮಹನೀಯರ ಜಯಂತಿ ಕಾರ್ಯಕ್ರಮಗಳು ಸಾಂಸ್ಕøತಿಕ ಕಾರ್ಯಕ್ರಮದ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕವಾಗಿ ಮಹಾನಾಯಕರಿಗೆ ನಮನ ಸಲ್ಲಿಸುವ ಕೆಲಸವಾಗಬೇಕು. ಸಮಾಜಮುಖಿಯಾಗಿ ಹಾಗೂ ಹಬ್ಬದ ರೀತಿಯಲ್ಲಿ ಜಯಂತಿ ಆಚರಿಸಬೇಕು. ಎಲ್ಲ ಸಮುದಾಯಗಳು, ಸಂಘ ಸಂಸ್ಥೆಗಳು ಸೇರಿ ಅದ್ಧೂರಿಯಾಗಿ ಆಚರಿಸಬೇಕು. ಹೋರಾಟದ ಮಾಡಿದ ನಾಯಕರಿಗೆ ಜಿಲ್ಲಾ ಮಟ್ಟದಲ್ಲಿ ಅಂಬೇಡ್ಕರ್ ಹಾಗೂ ಜಗಜೀವನ್‍ರಾಂ ಪ್ರಶಸ್ತಿ ನೀಡಿ, ಗುರುತಿಸುವ ಕೆಲಸವಾಗಬೇಕು. ಈ ಪ್ರಶಸ್ತಿ ಆಯ್ಕೆಗಾಗಿ ಆಯ್ಕೆ ಸಮಿತಿ ರಚಿಸಬೇಕು.
ಚಿತ್ರದುರ್ಗ ನಗರದ ಎಲ್ಲ 35 ವಾರ್ಡ್‍ಗಳಲ್ಲಿಯೂ ಸಹ ಜಗಜೀವನರಾಂ ಹಾಗೂ ಅಂಬೇಡ್ಕರ್ ಅವರ ಹೆಸರಿನಲ್ಲಿ ಶುದ್ಧ ಕುಡಿಯುವ ನೀರು ಘಟಕ ಹಾಗೂ ಗ್ರಂಥಾಲಯ ಸ್ಥಾಪಿಸಬೇಕು. ನಗರದ ಯಾವುದಾದರೂ ಒಂದು ವೃತ್ತದಲ್ಲಿ ಬಾಬು ಜಗಜೀವನ್‍ರಾಂ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಸಲಹೆಗಳು ಕೇಳಿ ಬಂದವು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಡಿವೈಎಸ್‍ಪಿ ಪಿ.ಕೆ.ದಿನಕರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಜಯಣ್ಣ, ಬಿ.ರಾಜಪ್ಪ, ಕೆ.ಟಿ. ಶಿವಕುಮಾರ್, ಕೆ.ಕುಮಾರ್, ದುರುಗೇಶಪ್ಪ, ಪ್ರಸನ್ನ, ಗೌನಹಳ್ಳಿ ಗೋವಿಂದಪ್ಪ, ಮಹಂತೇಶ್, ಡಿ.ಎನ್.ಮೈಲಾರಪ್ಪ, ವೈ. ರಾಜಣ್ಣ, ಅವಿನಾಶ್, ನಾಗರಾಜಕಟ್ಟೆ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಡಿ.ಗೋಪಾಲಸ್ವಾಮಿ ನಾಯಕ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಮತ್ತಿತರರು ಇದ್ದರು.

