ಚಿತ್ರದುರ್ಗ. ಫೆ.17: ಚಿತ್ರದುರ್ಗ ನಗರಸಭೆಯ 2024-25ನೇ ಸಾಲಿನ ಬಜೆಟ್‍ಗೆ ಸಂಬಂಧಿಸಿದ ಅಗತ್ಯ ಸಿದ್ದತೆಗಳನ್ನು ಪೌರಾಯುಕ್ತೆ ಎಂ.ರೇಣುಕಾ ಕೈಗೊಂಡಿದ್ದಾರೆ. ಈ ಬಾರಿ ರೂ.112.78 ಕೋಟಿ ಆಯವ್ಯಯ ಮಂಡನೆಯಾಗಲಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲೀಕರಣ, ನಗರ ಸೌಂದರ್ಯೀಕರಣಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ.
ಇಲ್ಲಿನ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಈ ಕುರಿತು ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆ ನಡೆಯಿತು.
ಆಸ್ತಿ ತೆರಿಗೆ, ನೀರಿನ ಶುಲ್ಕ, ಬಾಡಿಗೆ, ಉದ್ದಿಮೆ ಪರವಾನಿಗೆ, ಅಭಿವೃದ್ಧಿ ಶುಲ್ಕ ಹಾಗೂ ಇತರೆ ಆದಾಯಗಳು ಸೇರಿ ಒಟ್ಟು ರೂ.30.53 ಕೋಟಿ ನಗರಸಭೆಯ ಸ್ವಂತ ಆದಾಯವಿದೆ. ಇದರೊಂದಿಗೆ ರಾಜ್ಯ ಸರ್ಕಾರದಿಂದ ಎಸ್.ಎಫ್.ಸಿ, ನಗರೋತ್ಥಾನ ಹಾಗೂ ಡಿಎಂಎಫ್‍ಟಿ ಶಾಸಕರ ಅನುದಾನ ಸೇರಿ ರೂ.71.20 ಕೋಟಿ ಅನುದಾನ ನಗರಸಭೆಗೆ ದೊರಕಲಿದೆ. ಹಾಗೂ ಕೇಂದ್ರ ಸರ್ಕಾರದ 15ನೇ ಹಣಕಾಸು, ನಲ್ಮ್, ಸ್ವಚ್ಛ ಭಾರತ್ ಮಿಷನ್ ಹಾಗೂ ಇತರೆ ಅನುದಾನಗಳಿಡಿ ಅಡಿ ರೂ.11.05 ಕೋಟಿ ಅನುದಾನ ನಗರಸಭೆ ಲಭ್ಯವಾಗಲಿದ್ದು, ಒಟ್ಟು ರೂ.112.78 ಕೋಟಿ ಆದಾಯದ ನಿರೀಕ್ಷೆಯೊಂದಿಗೆ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸಿಕೊಳ್ಳಲಾಗಿದೆ.
ನಗರದ ಬೀದಿ ದೀಪ, ನೀರು ಸರಬರಾಜು, ನಗರಸಭೆ ಸಂಬಂಧಿಸಿದ ಕಚೇರಿ, ಕಟ್ಟಡ, ಗ್ರಂಥಾಲಯಗಳ ವಿದ್ಯುತ್ ಪಾವತಿಗಾಗಿ ರೂ.21 ಕೋಟಿ ಅನುದಾನ ಮೀಸಲಿರಿಸಲಾಗಿದೆ. ನಗರದ ರಸ್ತೆಗಳ ಅಭಿವೃದ್ಧಿಗಾಗಿ ರೂ.18.75 ಕೋಟಿ, ತಾಜ್ಯ ನಿರ್ವಹಣೆ, ತಾಜ್ಯ ಸಂಗ್ರಹಣೆ ವಾಹನಗಳು, ಶೌಚಾಲಯಗಳ ಅಭಿವೃದ್ಧಿ, ಹೊರಗುತ್ತಿಗೆ ನೌಕರರ ವೇತನ, ಇಂಧನ ಸೇರಿ ನಗರದ ನೈರ್ಮಲೀಕರಣ ಕಾರ್ಯಗಳಿಗೆ ಒಟ್ಟು ರೂ.13.50 ಕೋಟಿ, ನಗರಸಭೆಯ ಸಿಬ್ಬಂದಿ ವೇತನಕ್ಕಾಗಿ ರೂ.10 ಕೋಟಿ, ನಗರದ ಸೌಂದರ್ಯೀಕರಣ, ಆಟೋರಿಕ್ಷಾ ನಿಲುಗಡೆ, ಪಾರ್ಕಿಂಗ್, ಖಾಸಗಿ ಬಸ್ ನವೀಕರಣ, ನಾಮಫಲಕಗಳ ಅಳವಡಿಕೆ, ನಗರ ಪ್ರಮುಖ ವೃತ್ತಗಳ ಅಭಿವೃದ್ಧಿಗಾಗಿ ಒಟ್ಟು ರೂ.7 ಕೋಟಿ ಅನುದಾನಗಳನ್ನು ಪ್ರಮುಖವಾಗಿ ಆಯವ್ಯಯದಲ್ಲಿ ಒದಗಿಸಲಾಗಿದೆ.
ನಗರದ ಚರಂಡಿ ಹಾಗೂ ಒಳಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ರೂ.9 ಕೋಟಿ, ನೀರು ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು, ದಾಸ್ತಾನು ಖರೀದಿ ಹಾಗೂ ಹೊರಗುತ್ತಿಗೆ ನೌಕರರ ವೇತನಕ್ಕಾಗಿ ರೂ.8 ಕೋಟಿ, ಉದ್ಯಾನವನ ಮತ್ತು ರುದ್ರಭೂಮಿ ಅಭಿವೃದ್ಧ್ದಿಗೆ ರೂ.3.25 ಕೋಟಿ, ಬೀದಿ ದೀಪಗಳ ಅಳವಡಿಕೆಗೆ ರೂ.3 ಕೋಟಿ ಅನುದಾನವನ್ನು ಆಯವ್ಯಯದಲ್ಲಿ ಇರಿಸಲಾಗಿದೆ.
ಕಚೇರಿ ವೆಚ್ಚಗಳ ನಿರ್ವಹಣೆಗೆ ರೂ.3.75 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ವಿಶೇಷ ಚೇತನರ ಕಲ್ಯಾಣಕ್ಕಾಗಿ ರೂ.1.50 ಕೋಟಿ, ಸ್ವಚ್ಛ ಭಾರತ್ ಮಿಷನ್‍ಗೆ ರೂ.1.50ಕೋಟಿ, ಜಾಹೀರಾತು ಹಾಗೂ ಇತರೆ ವೆಚ್ಚಗಳಿಗೆ ರೂ.1 ಕೋಟಿ, ಹಾಗೂ ನಲ್ಮ್ ಯೋಜನೆಗೆ ರೂ.50 ಲಕ್ಷ ಅನುದಾನ ಆಯವ್ಯಯದಲ್ಲಿ ಖರ್ಚಾಗುವ ನಿರೀಕ್ಷೆಯಿದೆ.
ರಾಜ್ಯ ಸರ್ಕಾರಕ್ಕೆ ರೂ.3.75 ಕೋಟಿ ಸೆಸ್ ಹಾಗೂ ರೂ.1 ಕೋಟಿ ಬಾಕಿ ಪಾವತಿಯನ್ನು ಈ ಬಾರಿಯ ಆಯವ್ಯಯದಲ್ಲಿ ಮಾಡಲಾಗುವುದು.
ನಗರ ಹಸರೀಕರಣಕ್ಕೆ ಪಣ : ಈ ಹಿಂದೆ ನಗರದ ಅಭಿವೃದ್ಧಿಗಾಗಿ ಹೆಚ್ಚಿನ ಗಿಡ ಮರಗಳನ್ನು ಕಡೆಯಲಾಗಿದೆ. ನಗರದಲ್ಲಿ ಗಿಡ ಮರಗಳನ್ನು ಬೆಳೆಸಲು ನಗರಸಭೆಯಿಂದ ಯೋಜನೆ ರೂಪಿಸುವಂತೆ ನಗರಸಭಾ ಸದಸ್ಯರು ಸಭೆಯಲ್ಲಿ ಸಲಹೆ ನೀಡಿದರು.
ನಗರಸಭೆ ವತಿಯಿಂದ ಉದ್ಯಾನವನ ಸೇರಿದಂತೆ ನಗರಸಭೆ ವ್ಯಾಪ್ತಿಯ ಜಾಗಗಳಲ್ಲಿ ಗಿಡಗಳ ನೆಡಲು ಕ್ರಮವಹಿಸಲಾಗುವುದು. ಇದರ ಜೊತೆಗೆ ಟಾರ್ಗೆಟ್ ಯುವ ವೇದಿಕೆ ನೆಟ್ಟ ಗಿಡಗಳ ರಕ್ಷಣೆಗೆ ನಗರಸಭೆ ಕ್ರಮ ಕೈಗೊಂಡಿದೆ. ಈ ಗಿಡಗಳಿಗೆ ಎಸ್.ಟಿ.ಪಿ ಪ್ಲಾಂಟ್‍ಗಳಲ್ಲಿ ಶುದ್ಧೀಕರಿಸಿ ನೀರನ್ನು ಉಣಿಸಲು ಪ್ರತ್ಯೇಕವಾಗಿ ಟ್ಯಾಂಕರ್ ಮೀಸಲಿಡಲಾಗುವುದು ಎಂದು ಪೌರಾಯುಕ್ತೆ ರೇಣುಕಾ.ಎಂ ತಿಳಿಸಿದರು.
ಪ್ರಮುಖ ವೃತ್ತಗಳ ಅಭಿವೃದ್ಧಿ : ಈ ಬಾರಿಯ ಆಯ್ಯವಯದಲ್ಲಿ ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ ಅನುದಾನ ಮೀಸಲಿಡಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಪುತ್ಥಳಿಗಳಿಗೆ ಚಾವಣಿ ನಿರ್ಮಾಣ, ಕೈದೋಟ, ವಿದ್ಯುತ್ ದೀಪಾಲಂಕಾರ, ಸಂಚಾರಿ ದೀಪಗಳನ್ನು ಅಳವಡಿಸುವುದಾಗಿ ಪೌರಾಯುಕ್ತೆ ರೇಣುಕಾ.ಎಂ ಹೇಳಿದರು. ನಗರದಲ್ಲಿ ಆಧುನಿಕ ನಾಮಫಲಕಗಳನ್ನು ಅಳವಡಿಸಲಾಗುವುದು. ಈಗಾಗಲೇ ಸಾರ್ವಜನಿಕ ಮನವಿಯಂತೆ ಡಿವೈಡರ್‍ಗಳನ್ನು ತೆರವುಗೊಳಿಸಲಾಗಿದೆ ಎಂದರು.
22 ಹೊಸ ಕಸ ಸಂಗ್ರಹಣೆಯ ಆಟೋ ಟಿಪ್ಪರ್ ಖರೀದಿ ಟೆಂಡರ್ : ನಗರದ ಕಸ ಸಂಗ್ರಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಅನುಕೂಲವಾಗುವಂತೆ ಹೊಸದಾಗಿ 22 ಕಸ ಸಂಗ್ರಹಣೆಯ ಆಟೋ ಟಿಪ್ಪರ್ ಖರೀದಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು. ಪ್ರಸ್ತುತ 31 ಆಟೋ ಟಿಪ್ಪರ್‍ಗಳು ಇದ್ದು, ಕಸ ಸಂಗ್ರಹಿಸುತ್ತಿವೆ. ಇದರಲ್ಲಿ 10 ರಿಂದ 12 ವಾಹನಗಳು ನಿರುಪಯುಕ್ತವಾಗಿವೆ. ನಗರದಲ್ಲಿ ಒಟ್ಟು 35 ವಾರ್ಡ್‍ಗಳಿದ್ದು, ಪ್ರತಿ ವಾರ್ಡ್‍ಗೂ ಪ್ರತ್ಯೇಕವಾಗಿ ಒಂದೊಂದು ಕಸ ಸಂಗ್ರಹಣೆಯ ಆಟೋ ಟಿಪ್ಪರ್‍ಗಳನ್ನು ನಿಗಧಿಪಡಿಸಲಾಗುವುದು.
ಏಪ್ರಿಲ್ 1 ರಿಂದ ಈ ವಾಹನಗಳು ಕಾರ್ಯರಂಭ ಮಾಡಲಿವೆ. ನಗರಸಭೆಯ ಬಳಿ 2 ನೀರಿನ ಟ್ಯಾಂಕ್‍ರ್‍ಗಳಿಗೆ ನಗರಕ್ಕೆ ಕನಿಷ್ಠ 5 ಟ್ಯಾಂಕರ್‍ಗಳ ಅವಶ್ಯಕತೆ ಇದ್ದು, ಈ ಬಾರಿಯ ಅಯವ್ಯಯದಲ್ಲಿ 3 ಹೊಸ ಟ್ಯಾಂಕರ್ ಖರೀದಿಸಲಾಗುವುದು. ಇದರೊಂದಿಗೆ ಹೊಸದಾಗಿ ಇನ್ನೊಂದು ಮುಕ್ತಿ ವಾಹನವನ್ನು ಖರೀದಿಸುವುದಾಗಿ ಪೌರಾಯುಕ್ತೆ ರೇಣುಕಾ.ಎಂ ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ನಗರಸಭೆ ಸದಸ್ಯರಾದ ಜಿ.ಹರೀಶ್, ಕೆ.ಮಂಜುಳಾ, ಶಕೀಲಬಾನು, ಭಾಗ್ಯಮ್ಮ, ಎಸ್.ಜಯಪ್ಪ, ಎಂ.ಪಿ.ಅನಿತ, ಮಹಮಹ್ಮದ್ ದಾವುದ್, ಮೊಹಮ್ಮದ್ ಜೈಲಾಬ್‍ದ್ದೀನ್, ಸುಮಿತಾ,ಬಿ.ಎನ್, ದೀಪಕ್.ಜೆ.ಎಸ್, ಎಸ್.ಸಿ.ತಾರಕೇಶ್ವರಿ, ನಗರಸಭೆಯ ಮುಖ್ಯ ಲೆಕ್ಕಾಧಿಕಾರಿ ಮೆಹಬೂಬ್ ಅಲಿ, ಇತರೆ ಅಧಿಕಾರಿಗಳಾದ ರಘುವೀರ್, ಕೆ.ಪುಟ್ಟಪ್ಪ ಸೇರಿದಂತೆ ಇತರೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.