ಚಿತ್ರದುರ್ಗ, ಚಳ್ಳಕೆರೆ ಹಾಗೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ :  ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ

2 Min Read

ಚಿತ್ರದುರ್ಗ. ಜ.08: ಚಿತ್ರದುರ್ಗ, ಚಳ್ಳಕೆರೆ ಹಾಗೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಚಿತ್ರದುರ್ಗ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ, ನೀಲನಕ್ಷೆ ಹಾಗೂ ಕಾಮಗಾರಿ ಸ್ಥಳ ವೀಕ್ಷಿಸಿ, ಅಮೃತ್ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಂದಾಜು 16 ಕೋಟಿ ರೂ. ವೆಚ್ಚಕ್ಕೆ ಟೆಂಡರ್ ಕರೆಯಲಾಗಿದೆ.  ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ದಾವಣಗೆರೆ-ತುಮಕೂರು ನೇರ ರೈಲ್ವೇ ಯೋಜನೆಯಲ್ಲಿ ಕಾಮಗಾರಿಗಳನ್ನು ಹೊರತುಪಡಿಸಿ, ಅಮೃತ್ ಯೋಜನೆಯಡಿ ಮೂಲಭೂತ ಸೌಕರ್ಯ ಹಾಗೂ ಆಡಳಿತಾತ್ಮಕ ಕಚೇರಿಯನ್ನು ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಅಂತರಾಷ್ಟ್ರೀಯ ಮಟ್ಟದ ರೈಲ್ವೇ ನಿಲ್ದಾಣ ನಿರ್ಮಿಸಲಾಗುವುದು. ರೂ. 02.36 ಕೋಟಿ ವೆಚ್ಚದಲ್ಲಿ ಚಳ್ಳಕೆರೆ ರೈಲ್ವೇ ಫ್ಲಾಟ್ ಫಾರಂ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೈಸೂರಿನಲ್ಲಿ ನಡೆದ ರೈಲ್ವೆ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಜಿಲ್ಲೆಯ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಸುಮಾರು ರೂ.18 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಗಳನ್ನು ಆರಂಭಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶೀಘ್ರವೇ ಅಮೃತ್ ಯೋಜನೆಗೆ ಪ್ರಧಾನ ಮಂತ್ರಿಗಳು ಚಾಲನೆ ನೀಡುವರು ಎಂದು ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಚಿತ್ರದುರ್ಗ ರೈಲ್ವೇ ನಿಲ್ದಾಣವನ್ನು ನೇರ ರೈಲ್ವೇ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗುವುದು. ಈ ಹಿನ್ನಲೆಯಲ್ಲಿ ನೇರ ರೈಲ್ವೇ ಯೋಜನೆಯ ಕಾಮಗಾರಿಗೆ ಚ್ಯುತಿ ಹಾಗೂ ಅಡಚಣೆ ಉಂಟಾಗದಂತೆ ಅಮೃತ್ ಯೋಜನೆಯಡಿ ಆಡಳಿತ ಕಚೇರಿಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ ಭಾರತಿ ಸಚಿವರಿಗೆ ತಿಳಿಸಿದರು.

ಸದ್ಯ ಚಿತ್ರದುರ್ಗ ರೈಲ್ವೇ ನಿಲ್ದಾಣದ ಒಂದನೇ ಪ್ಲಾಟ್ ಫಾರಂನಲ್ಲಿ ಮಾತ್ರ ಪ್ರಯಾಣಿಕ ರೈಲುಗಳು ಕಾರ್ಯಚರಣೆ ನಡೆಸುತ್ತಿವೆ. 2ನೇ ಫ್ಲಾಟ್ ಫಾರಂ ಇಲ್ಲದ ಕಾರಣ ಓವರ್ ಬ್ರಿಡ್ಜ್ ನಿರ್ಮಿಸಿಲ್ಲ. ಮೂರನೇ ರೈಲ್ವೇ ಹಳಿಯಲ್ಲಿ ಗೂಡ್ಸ್‍ರೈಲುಗಳು ಮಾತ್ರ ಕಾರ್ಯಚರಣೆ ನಡೆಸುತ್ತಿವೆ. ನೇರ ರೈಲ್ವೇ ಮಾರ್ಗ ಯೋಜನೆಯಲ್ಲಿ ಸಂಪೂರ್ಣವಾಗಿ ರೈಲ್ವೇ ನಿಲ್ದಾಣವನ್ನು ನಿರ್ಮಾಣ ಮಾಡಲಿದ್ದು, ಆ ಸಂದರ್ಭದಲ್ಲಿ ಎರಡು ಫ್ಲಾಟ್ ಫಾರಂಗಳನ್ನು ನಿರ್ಮಿಸಿ, ಪ್ರಯಾಣಿಕರ ಅನುಕೂಲಕ್ಕೆ ಓವರ್ ಬ್ರಿಡ್ಜ್ ಸೌಲಭ್ಯ ಕಲ್ಪಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದರು.

ಹಳೆಯ ಪಿ.ಬಿ. ರೋಡ್‍ನಲ್ಲಿ ರೈಲ್ವೇ ಗೇಟ್ ಬಳಿ ಬ್ರಿಡ್ಜ್ ನಿರ್ಮಿಸುವ ಕಾಮಗಾರಿಗೆ ಎನ್.ಓ.ಸಿ ನೀಡುವಂತೆ ರೈಲ್ವೇ ಅಧಿಕಾರಿಗಳು ಪತ್ರ ಬರೆದಿದ್ದು, ಶೀಘ್ರವೇ ಎನ್.ಓ.ಸಿ ನೀಡುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅವರಿಗೆ ಕರೆ ಮಾಡಿ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಉಪ ವ್ಯವಸ್ಥಾಪಕ ರಾಮಸುಬ್ಬಯ್ಯ, ಡಿವಿಜಿನಲ್ ಕಮರ್ಷಿಯಲ್ ಮ್ಯಾನೇಜರ್ ಲೋಹಿತಾಶ್ವ, ಬ್ರಿಡ್ಜ್ ಡೆಪ್ಯೂಟಿ ಇಂಜಿನಿಯರ್ ಉನ್ನೀಕೃಷ್ಣನ್, ಸಹಾಯಕ ವಿಭಾಗೀಯ ಅಭಿಯಂತರ ನಿತ್ಯಾನಂದ ಸ್ವಾಮಿ, ಟ್ರಾಪಿಕ್ ಇನ್ಸ್‍ಪೆಕ್ಟರ್ ಬಿ.ಹನುಮಂತು, ಸ್ಟೇಷನ್ ಸೂಪರಿಡೆಂಟ್ ಇ.ಮಂಜುನಾಥ್, ಆರ್‍ಪಿಎಫ್ ಎಸ್‍ಐ ಜಯಣ್ಣ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಸೇರಿದಂತೆ ರೈಲ್ವೇ ಇಲಾಖೆ ಸಿಬ್ಬಂದಿ ಇದ್ದರು.

 

Share This Article
Leave a Comment

Leave a Reply

Your email address will not be published. Required fields are marked *