ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
* 80 ವರ್ಷ ಮೇಲ್ಪಟ್ಟ 203 ಮತದಾರರು
* ವಿಶೇಷ ಚೇತನ ವರ್ಗದ 50 ಮತದಾರರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ
ಚಿತ್ರದುರ್ಗ,(ಮೇ.02) : ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 203 ಮತದಾರರು ಮತ್ತು ವಿಶೇಷ ಚೇತನ ವರ್ಗದ 50 ಮತದಾರರು ಮನೆಯಲ್ಲಿಯೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದು, ಇದೇ ಮೇ 3 ಮತ್ತು 5ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ರವರೆಗೆ ಚುನಾವಣಾ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮತದಾನ ಮಾಡಿಸುವ ಕಾರ್ಯ ನಡೆಸಲಿದ್ದಾರೆ.
ಈ ಸಮಯದಲ್ಲಿ ಮತಗಟ್ಟೆ ಮಟ್ಟದ ಏಜೆಂಟರುಗಳು ಹಾಜರಿರಬೇಕು ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಆರ್.ಚಂದ್ರಯ್ಯ ತಿಳಿಸಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರುಗಳಿಗೆ, ಎಲ್ಲಾ ಮತಗಟ್ಟೆಗಳಿಗೆ ಮತಗಟ್ಟೆ ಮಟ್ಟದ ಏಜೆಂಟರ್‍ಗಳನ್ನು ನೇಮಕ ಮಾಡಿ ನೇಮಕಾತಿ ಪಟ್ಟಿಯನ್ನು ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ. ಮತದಾನದ ದಿನದಂದು ಏಜೆಂಟರುಗಳು ಹಾಜರಾಗದಿದ್ದರೂ ಮನೆಯಿಂದ ಮತದಾನ ಪ್ರಕ್ರಿಯೆಯನ್ನು ನಿಗದಿತ ಸಮಯದಲ್ಲಿ ನಡೆಸಲಾಗುವುದು.
ಮನೆಯಿಂದ ಮತದಾನ ಪ್ರಕ್ರಿಯೆ ನಿರ್ವಹಿಸಲು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 16 ಸೆಕ್ಟರ್ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ಸೆಕ್ಟರ್ ಅಧಿಕಾರಿ, ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬ ಮೈಕ್ರೋ ಅಬ್ಸರ್‍ವರ್ ಮತ್ತು ಒಬ್ಬ ವಿಡಿಯೋ ಗ್ರಾಫರ್, ಒಬ್ಬ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.
ಈ ತಂಡಗಳು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ನೊಂದಾಯಿಸಿಕೊಂಡಿರುವ 80 ವರ್ಷ ದಾಟಿದ 203 ಹಾಗೂ ವಿಶೇಷ ಚೇತನ ವರ್ಗದ 50 ಮತದಾರರಿಂದ ಅಂಚೆ ಮತ ಪತ್ರದ ಮೂಲಕ ಚುನಾವಣೆಯ ಎಲ್ಲಾ ನಿಯಮಗಳು ಮತ್ತು ಗೌಪ್ಯತೆಯನ್ನು ಪಾಲಿಸಿ ಮತ ಚಲಾಯಿಸಲು ಅವಕಾಶ ನೀಡಲಿದ್ದಾರೆ.
ಇದೇ ಮೇ.3ರಂದು ಮನೆಯಿಂದ ಮತದಾನ ಪ್ರಕ್ರಿಯೆ ಏರ್ಪಡಿಸಿರುವ ಬಗ್ಗೆ ಒಂದು ಪಕ್ಷ ಆ ದಿನ ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ, ಇದೇ ಮೇ.5ರಂದು ಮತ್ತೊಮ್ಮೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವ ಬಗ್ಗೆ ಮನೆಯಿಂದ ಮತದಾನ ಮಾಡಲು ಇಚ್ಛಿಸಿ ನೊಂದಾಯಿಸಿಕೊಂಡಿರುವ 80 ವರ್ಷ ದಾಟಿದ ಹಾಗೂ ವಿಶೇಷ ವರ್ಗದ ಮತದಾರರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆರ್.ಚಂದ್ರಯ್ಯ ತಿಳಿಸಿದ್ದಾರೆ.