ಚಿತ್ರದುರ್ಗ : ಎಸ್.ಜೆ.ಎಂ. ಪಾಲಿಟೆಕ್ನಿಕ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

2 Min Read

 

ಸುದ್ದಿಒನ್, ಚಿತ್ರದುರ್ಗ, ಏ,14 : ಇಂದಿನ ಪೀಳಿಗೆಗೆ ಹಿಂದಿನ ಸುಧಾರಕರ ಸಾಮಾಜಿಕ ಕಾಳಜಿಯ ಆಶಯಗಳೇನು ಎನ್ನುವುದನ್ನು ತಿಳಿಸಬೇಕಿದೆ. ಕೇವಲ ಅಂಕ ಗಳಿಸುವ ನಿಟ್ಟಿನಲ್ಲಿ ಮಕ್ಕಳನ್ನ ಪ್ರೇರೇಪಿಸಿ ,ಉಳಿದ ವಿಚಾರಗಳನ್ನು ಗೌಣ ಮಾಡಿದಲ್ಲಿ ಅವರಿಗೆ ನಮ್ಮ ಹಿಂದಿನವರು ಸುಭದ್ರ ಸಮಾಜ ಕಟ್ಟಲು ಪಟ್ಟ ಶ್ರಮ ಏನೂ ಎನ್ನುವುದನ್ನು ಅರ್ಥೈಸಿ ಆ ಮಾರ್ಗದಲ್ಲಿ ಸಾಗಲು ನಾವು ಪ್ರೇರಣೆ ನೀಡಬೇಕೆಂದು,ಅಂತಹ ಸಾಲಿನಲ್ಲಿ ಬರುವ ಡಾ. ಬಿ. ಆರ್. ಅಂಬೇಡ್ಕರ್ ಅವರು ಸರ್ವರು ಆದರಿಸಬಹುದಾದ ಸಂವಿಧಾನ ನೀಡಿರುವ ಅವರ ವ್ಯಕ್ತಿತ್ವವನ್ನು ನಾವು ಸ್ಮರಿಸುತ್ತ ಸಾಗಬೇಕಿದೆ ಎಂದು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ನ ಪ್ರಾಧ್ಯಾಪಕರಾದ ಗಂಗಾಧರ್ ಅವರು ಅಭಿಪ್ರಾಯಪಟ್ಟರು.

ಅವರು ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಅವರ 134ನೇಜಯಂತಿ ಏರ್ಪಡಿಸಿದ್ದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿಗೆ ಪುಷ್ಪ ನಮನ ಸಲ್ಲಿಸಿ ನಾವು ಮಕ್ಕಳನ್ನು ಸಾಂಸ್ಕೃತಿಕವಾಗಿ ಹದಗೊಳಿಸಿ ಅವರಿಗೆ ಬೇರೆ ಬೇರೆ ವಿಚಾರಗಳ ಕಡೆಗೆ ಗಮನ ಹರಿಸಲು ಸಹಕಾರ ನೀಡಿದರೆ ಓದಿನೊಂದಿಗೆ ಹಲವು ವಿಚಾರಗಳ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ .ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಅಂಬೇಡ್ಕರ್ ಅವರು ಮಾದರಿಯಾಗಬೇಕೆಂದು ಸಲಹೆ ಮಾಡಿದರು.

ಮತ್ತೋರ್ವ ಪ್ರಾಧ್ಯಾಪಕರಾದ ಗೋವಿಂದರಾಜ್ ಅವರು ಅಂಬೇಡ್ಕರ್ ಕೇವಲ ಆರ್ಥಿಕ ತಜ್ಞರಾಗಿರದೆ, ತತ್ವಜ್ಞಾನಿ, ರಾಜಕೀಯ ಮುತ್ಸದ್ದಿ, ನ್ಯಾಯವಾದಿ ,ಪ್ರಗತಿಪರ ಚಿಂತಕ ಹೀಗೆ ವಿಶೇಷ ಗುಣಗಳ ಗಣಿ ಆಗಿದ್ದವರು. ಸಮಾನತೆ ಅನ್ನುವುದು ಕೇವಲ ಒಂದು ಜನಾಂಗಕ್ಕೆ ಅಲ್ಲ, ಯಾರು ಹಿಂದುಳಿದಿದ್ದಾರೆ ಅವರೆಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದವರು ಅಂಬೇಡ್ಕರ್ ರವರಾಗಿದ್ದರು. 12ನೇ ಶತಮಾನದಲ್ಲಿ ಇಂತಹ ಒಂದು ಕ್ರಾಂತಿಯಾಗಿದ್ದು ಅದನ್ನು ಮತ್ತೆ ಪುನರಾವರ್ತನೆ ಅಂದರೆ ಸಂವಿಧಾನದ ರೂಪದಲ್ಲಿ ಕೊಟ್ಟ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಅಂಬೇಡ್ಕರ್ ಅವರು ಚಿಂತನೆಗಳು ಒಂದು ವರ್ಗ, ಜಾತಿ ,ಧರ್ಮಕ್ಕೆ ಸೀಮಿತವಾದದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಎಲ್ಲರಿಗೂ ಅನ್ವಯವಾಗುತ್ತವೆ ಎಂದು ಕಾಲೇಜಿನ ಅಧೀಕ್ಷಕ ಸಿ.ಎನ್. ಮೋಹನ್ ಅಭಿಪ್ರಾಯಪಟ್ಟರು.
ಗ್ರಂಥಪಾಲಕ ವೀರಯ್ಯ .ಎಂ ಮಾತಾಡಿ ಆ ಕಾಲಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಪತ್ರಿಕೆ ಆರಂಭಿಸಿದ ಅಂಬೇಡ್ಕರ್ ಅವರು ,ಜಗತ್ತಿನಲ್ಲಿ ಖಾಸಗಿಯಾಗಿ ಮಾದರಿ ಎನ್ನುವ ಐವತ್ತು ಸಾವಿರದಷ್ಟು ಎಲ್ಲಾ ಭಾಷೆಗಳ ಕೃತಿಗಳನ್ನು ಸೇರಿಸಿ ಗ್ರಂಥಾಲಯವನ್ನೇ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದು ಬಹುದೊಡ್ಡ ಕೆಲಸ ಎಂದು ನೆನಪಿಸಿಕೊಂಡರು.

ಅಂಬೇಡ್ಕರ್ ಅವರು ಶಾಲಾ ,ಕಾಲೇಜುಗಳಲ್ಲಿ ಓದುವಾಗ ಜಾತಿ ಪದ್ಧತಿಯಿಂದ ಆಗುತ್ತಿದ್ದ ನೋವುಗಳನ್ನು ಸಹಿಸಿಕೊಂಡು ಮುಂದೆ ಅವು ಮರುಕಳಿಸದಂತೆ ಬೇರೆಯವರಿಗೆ ಇದರಿಂದ ನೋವಾಗಬಾರದೆಂದು ತೀರ್ಮಾನಿಸಿ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾಡಿದ ಕೀರ್ತಿ ಸಂವಿಧಾನ ಶಿಲ್ಪಿಗೆ ಸಲ್ಲುತ್ತದೆ ಎಂದು ಸಿಬ್ಬಂದಿ ಜಿ. ಕೊಟ್ರಪ್ಪ ಅವರು ಅಭಿಪ್ರಾಯಪಟ್ಟರು.
ಮತ್ತೋರ್ವ ಸಿಬ್ಬಂದಿ ಲಿಂಗರಾಜು ಟಿ.ಎನ್. ಮಾತನಾಡಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಉಚ್ಛ, ನೀಚ ಎಂಬ ತರತಮ ಭಾವನೆಯಿಂದ ನೊಂದು ಬೆಂದವರಿಗಾಗಿ ಬೆಳಕಾಗಿ ಬಂದವರು ಅಂಬೇಡ್ಕರ್ ಅವರು. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.ಎಂದು ಅವರ ಕಾರ್ಯಗಳನ್ನು ಸ್ಮರಿಸಿಕೊಂಡರು.

ಮತ್ತೋರ್ವ ಸಿಬ್ಬಂದಿ ರುದ್ರಮೂರ್ತಿ ಎಂ.ಜೆ. ಮಾತನಾಡಿ ಯಾವುದೇ ಸಮಾಜ ಸುಧಾರಕರ ಜಯಂತಿ,ಸ್ಮರಣೆ ಇತರ ಕಾರ್ಯಕ್ರಮ ಕೇವಲ ಶಿಷ್ಟಾಚಾರ ರೂಪದಲ್ಲಿರದೆ ಅವನ್ನ ಎಲ್ಲರೂ ಭಾವನಾತ್ಮಕವಾಗಿ ಶ್ರದ್ದೆ, ನಿಷ್ಠೆಯಿಂದ ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ. ಕೇವಲ ಸಾಂಕೇತಿಕ ಆಗಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರಾದ ವಿ. ಟಿ .ರವಿ,ಸಿ.ಮಲ್ಲಿಕಾರ್ಜುನ, ಹಾಗೂ ಜಿ.ಎಸ್. ಗುರುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *