ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಮನಸ್ಸಿಗೆ ತೋಚಿದಂತೆ ಅಧಿಕಾರ ಚಲಾಯಿಸುತ್ತಿರುವ ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸೇವೆಯಿಂದ ಅಮಾನತ್ತುಗೊಳಿಸಿ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಚಳ್ಳಕೆರೆ ತಾಲ್ಲೂಕು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೊಳಕಾಲ್ಮುರು ತಾಲ್ಲೂಕು ಸಮಿತಿ ಜೊತೆಗೂಡಿ ಜಿಲ್ಲಾ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಪಿಡಿಓ ಅಧಿಕಾರ ದುರಪಯೋಗಪಡಿಸಿಕೊಳ್ಳುತ್ತಿರುವುದರ ವಿರುದ್ದ ತನಿಖೆ ನಡೆಸುವಂತೆ ಆರು ತಿಂಗಳ ಹಿಂದೆಯೇ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತರಲಾಗಿತ್ತು.
ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಮಿತಿ ರಚಿಸಿ ಪಿಡಿಓ ಭ್ರಷ್ಟಾಚಾರ ನಡೆಸಿರುವುದನ್ನು ತನಿಖೆ ನಡೆಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಿ ಎರಡು ತಿಂಗಳಾದರೂ ಇನ್ನು ಕ್ರಮ ಕೈಗೊಂಡಿಲ್ಲದಿರುವುದು ಬೇಸರದ ಸಂಗತಿ. ಕೇವಲ ಇದೊಂದೆ ಪಂಚಾಯಿತಿಯಲ್ಲ.
ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ, ಭ್ರಷ್ಟಾಚಾರವೆನ್ನುವುದು ಮಾಮೂಲಾಗಿಬಿಟ್ಟಿದೆ. ಉನ್ನತಾಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ನಿಸ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಪಿಡಿಓ ನಡೆಸಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆರು ತಿಂಗಳ ಹಿಂದೆಯ ಚಳುವಳಿ ಆರಂಭಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಮಾತುಕತೆ ನಡೆಸಿದ್ದೆವು. ತಪ್ಪು ಮಾಡಿದವರ ಮೇಲೆ ಕೂಡಲೆ ಕ್ರಮ ಕೈಗೊಂಡರೆ ಬೇರೆಯವರಿಗೆ ಎಚ್ಚರಿಕೆಯಾಗುತ್ತದೆ.
ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿಜವಾದ ಫಲಾನುಭವಿಗಳಿಗೆ ಯಾವುದೇ ಯೋಜನೆಗಳನ್ನು ದೊರಕಿಸದ ಪಿಡಿಓ ಎಲ್ಲಾ ಕಾಮಗಾರಿಗಳಲ್ಲಿಯೂ ಹಣ ಲೂಟಿ ಹೊಡೆದಿದ್ದಾನೆ ಎಂದು ಆಪಾದಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೊಳಕಾಲ್ಮುರು ತಾಲ್ಲೂಕು ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತ ಎನ್.ಆರ್.ಇ.ಜಿ, ಕುಡಿಯುವ ನೀರು, ಹದಿನೈದನೆ ಹಣಕಾಸು ಯೋಜನೆಯಡಿ ಸಾಕಷ್ಟು ಅವ್ಯವಹಾರವೆಸಗಿರುವ ಪಿಡಿಓ ಕಾಮಗಾರಿಗಳು ನಡೆಯದಿದ್ದರೂ ಬಿಲ್ ಪಾಸ್ ಮಾಡಿದ್ದಾರೆಂದರೆ ಯಾವ ಹಂತದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ.
ಈ ಸಂಬಂಧ ಅನೇಕ ಹೋರಾಟಗಳನ್ನು ಮಾಡಿದ್ದರೂ ಅಧಿಕಾರಿಗಳು ಪಿಡಿಓ ಪಕ್ಕದಲ್ಲಿಟ್ಟುಕೊಂಡೆ ತನಿಖೆ ನಡೆಸಿದ್ದಾರೆಂದರೆ ಶಿಕ್ಷೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘಧ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನಡೆದಿರುವುದನ್ನು ವಿರೋಧಿಸಿ ಹದಿನಾಲ್ಕು ತಿಂಗಳ ಹಿಂದೆಯೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದೆವು. ಪಿಡಿಓ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಆರು ತಿಂಗಳ ಸಮಯ ತೆಗೆದುಕೊಳ್ಳಲಾಗಿದೆ ಎನ್ನುವುದಾದರೆ ಎಷ್ಟೊಂದು ಪ್ರಭಾವಿಯಿರಬಹುದೆನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆಡಳಿತ ವರ್ಗಕ್ಕೆ ಇಷ್ಟೊಂದು ಬೇಜವಾಬ್ದಾರಿಯಿರಬಾರದು.
ಜಿಲ್ಲೆಯಾದ್ಯಂತ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಭವಣೆಯಿದೆ. ಇ.ಸ್ವತ್ತು ಮಾಡಿಕೊಡಲು ಗ್ರಾಮ ಪಂಚಾಯಿತಿಗಳಲ್ಲಿ ಐದು ಸಾವಿರ ರೂ.ಗಳನ್ನು ಕೇಳುತ್ತಾರೆ. ಖಾತೆಗೆ ಹಣದ ಬೇಡಿಕೆಯಿಡುವುದು ಸಹಜವಾಗಿದೆ.
ಒಟ್ಟಾರೆ ಗ್ರಾಮ ಪಂಚಾಯಿತಿಗಳು ಭ್ರಷ್ಟಾಚಾರದ ಕೂಪವಾಗಿದ್ದು, ಕೊರೋನಾದಿಂದ ಎರಡು ವರ್ಷ ಜೀವಿಸುವುದೇ ರೈತರಿಗೆ ಕಷ್ಟವಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳ ಮುಂದೆ ಯಾವ್ಯಾವ ಕೆಲಸಕ್ಕೆ ಸರ್ಕಾರಕ್ಕೆ ಎಷ್ಟೆಷ್ಟು ಶುಲ್ಕ ಪಾವತಿಸಬೇಕೆಂದು ನಾಮಫಲಕ ಹಾಕಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಾಗೇನಹಾಳ್ ಕೊಟ್ರಬಸಪ್ಪ, ಮೊಳಕಾಲ್ಮುರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ರ‍್ಲಳ್ಳಿ ರವಿಕುಮಾರ್, ಮೊಳಕಾಲ್ಮುರು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ರಮೇಶ್ ಸೇರಿದಂತೆ ಅನೇಕ ರೈತರು ಹಾಗೂ ದಲಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಿಡಿಓ.ಅಮಾನತು : ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ವಿರುದ್ದ ಶಿಸ್ತು ಕ್ರಮ ಕೈಗೊಂಡು ಅಮಾನತ್ತುಗೊಳಿಸುವುದು ಸ್ವಲ್ಪ ತಡವಾಯಿತು ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ.
ಕಾನೂನು ಎಲ್ಲರಿಗೂ ಒಂದೆ ಹಾಗಾಗಿ ಪಿಡಿಓ ಬುಧವಾರ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ರೈತರಿಗೆ ತಿಳಿಸಿದಾಗ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ಅವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ. ಎಲ್ಲಿ ದೂರು ಬರುತ್ತದೋ ಅಲ್ಲಿ ತಡ ಮಾಡದೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ರೈತರು ಆಗ್ರಹಿಸಿದರು.