ಸುದ್ದಿಒನ್, ಚಿತ್ರದುರ್ಗ, ನವೆಂಬರ್.17 : ಒಂದು ವರ್ಷದ ಹಿಂದೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪೋಕ್ಸೋ ಪ್ರಕರಣದ ಆರೋಪಿಗೆ ಚಿತ್ರದುರ್ಗ ಜಿಲ್ಲೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (ಪೋಕ್ಸೋ) 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ
ಅತ್ತಿಮಗ್ಗೆ ಗ್ರಾಮದ ತಿಮ್ಮಯ್ಯ ಎಂಬ ಆರೋಪಿಯು ಚಾಕೊಲೇಟ್ ಕೊಡುವ ನೆಪದಲ್ಲಿ ಅಪ್ರಾಪ್ತ ವಯಸ್ಸಿನ ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ.
ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲೀಸ್ ಇನ್ಸ್ ಪೆಕ್ಟರ್ ಎಂ.ಡಿ.ಫೈಜುಲ್ಲಾ ಇವರು ತನಿಖೆಯನ್ನು ಪೂರೈಸಿ ಪೋಕ್ಸೋ ಕಾಯಿದೆ ಅಡಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಂತರ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ. ಕೋಮಲ ಅವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಕಠಿಣ ಸಜೆ ಮತ್ತು ರೂ. 10,000/- ದಂಡ ವಿಧಿಸಿ ಇಂದು (ದಿನಾಂಕ 17.11.2023 ರಂದು) ತೀರ್ಪು ನೀಡಿರುತ್ತಾರೆ ಮತ್ತು ನೊಂದ ಬಾಲಕಿಗೆ ಪರಿಹಾರವಾಗಿ
ಒಟ್ಟು ರೂ. 10,000/- ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ಚಿತ್ರದುರ್ಗ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಹೆಚ್.ಆರ್. ಜಗದೀಶ್ ವಾದಿಸಿದ್ದರು.