ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 : ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ ಪೋರ್ಟ್ ಪಡೆಯಲು ಪ್ರಯತ್ನಿಸಿದ ಆರೋಪಿಗೆ ಚಿತ್ರದುರ್ಗ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ. ನ್ಯಾಯಾಲಯ ಒಂದು ವರ್ಷ ಸಾದಾ ಶಿಕ್ಷೆ ಮತ್ತು 8500 ದಂಡ ವಿಧಿಸಿ ತೀರ್ಪು ನೀಡಿದೆ.

ಚಿತ್ರದುರ್ಗ ನಗರದ ರಾಮದಾಸ್ ಕಾಂಪೌಡ್ ವಾಸಿಯಾದ ಜುಲ್ಮೀಕರ್ 2015 ರಲ್ಲಿ ಬೆಂಗಳೂರಿನ ಪ್ರಾದೇಶಿಕ ಪಾಸ್ ಪೋರ್ಟ ಕಛೇರಿಗೆ ಇ.ಸಿ.ಎನ್.ಆರ್ ಪಾಸ್ ಪೋರ್ಟ ಪಡೆಯುವ ಸಲುವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಜೊತೆಗೆ ತಾನು 10ನೇ ತರಗತಿಯನ್ನು ಪಶ್ಚಿಮ ಬಂಗಾಳದ ರಬಿಂದ್ರ ಓಪನ್ ಸ್ಕೂಲ್ ಮಂಡಳಿಯಲ್ಲಿ ವ್ಯಾಸಂಗ ಮಾಡಿ ಅಂಕಪಟ್ಟಿ ಪಡೆದಿರುವುದಾಗಿ ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ ಅರ್ಜಿಯ ಜೊತೆ ಸಲ್ಲಿಸಿದ್ದನು.
ಈ ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಪಾಸ್ ಪೋರ್ಟ್ ಅಧಿಕಾರಿಗಳು ಪರಿಶೀಲಿಸಿದಾಗ ಅಂಕಪಟ್ಟಿ ಮತ್ತು ಪ್ರಮಾಣ ಪತ್ರದ ಬಗ್ಗೆ ಮೇಲ್ನೋಟಕ್ಕೆ ಸಂದೇಹಾಸ್ಪದವಾಗಿ ಕಂಡುಬಂದಿದೆ. ಅದರ ನೈಜತೆಯನ್ನು ಪರಿಶೀಲಿಸಲು ಪಶ್ಚಿಮ ಬಂಗಾಳದ ರಬಿಂದ್ರ ಓಪನ್ ಸ್ಕೂಲ್ ಮಂಡಳಿಗೆ ಅಂಕಪಟ್ಟಿಯನ್ನು ಕಳಿಸಿಕೊಟ್ಟು ಪರಿಶೀಲಿಸಿದಾಗ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳು ನಕಲಿಯಾಗಿರುತ್ತವೆ ಎಂದು ತಿಳಿದುಬಂದಿರುತ್ತದೆ.

ಆರೋಪಿಯು ಇ.ಸಿ.ಎನ್.ಆರ್ ಪಾಸ್ ಪೋರ್ಟ ಪಡೆಯಲು ಪಾಸ್ ಪೋರ್ಟ ಕಛೇರಿಗೆ ನಕಲಿ ಸೃಷ್ಟಿಸಿದ ದಾಖಲೆಯನ್ನು ಸಲ್ಲಿಸಿ ಮೋಸ ಮತ್ತು ವಂಚನೆಯನ್ನು ಮಾಡಿರುತ್ತಾನೆ. ಈ ಬಗ್ಗೆ ಚಿತ್ರದುರ್ಗ ನಗರ ಪೋಲಿಸ್ ಠಾಣೆಯಲ್ಲಿ ರಾಮದಾಸ್ ಕಾಂಪೌಡ್ ನಿವಾಸಿ ಆರೋಪಿ ಜುಲ್ಮೀಕರ್, ವಿರುದ್ದ ಪಾಸ್ ಪೋರ್ಟ ಅಧಿಕಾರಿಗಳು ದೂರು ದಾಖಲಿಸಿದ್ದರು. ಜಿ.ವಿ ನಾಗೇಂದ್ರ ಪ್ರಸಾದ ಎ.ಎಸ್.ಐ ರವರು ಈ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿ ವಾದ ವಿವಾದವನ್ನು ಆಲಿಸಿದ ಚಿತ್ರದುರ್ಗದ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ. ನ್ಯಾಯಾಲಯದ, ನ್ಯಾಯಾಧೀಶರಾದ ಶ್ರೀಮತಿ ಮಮತ ಡಿ. ರವರು ಆರೋಪಿಗೆ
1) ಕಲಂ 465 ಐಪಿಸಿ ಅಪರಾದಕ್ಕಾಗಿ 6 ತಿಂಗಳ ಸಾದಾ ಶಿಕ್ಷೆ 2000 ರೂ ದಂಡ,
2) ಕಲಂ 468 ಅಪರಾದಕ್ಕಾಗಿ 6 ತಿಂಗಳ ಶಿಕ್ಷೆ ಹಾಗೂ 2000 ರೂ ದಂಡ,
3) ಕಲಂ 471 ಐಪಿಸಿ ಅಪರಾದಕ್ಕಾಗಿ 6 ತಿಂಗಳ ಸಾದಾ ಶಿಕ್ಷೆ ಹಾಗೂ 2000 ರೂ ದಂಡ,
4) ಕಲಂ 420 ఐపిసి ಅಪರಾದಕ್ಕಾಗಿ 1 ವರ್ಷ ಸಾದಾ ಶಿಕ್ಷೆ ಹಾಗೂ 2000 ರೂ ದಂಡ, ಮತ್ತು
5) ಕಲಂ 12 ಪಾಸ್ ಪೋರ್ಟ ಕಾಯ್ದೆ ಪ್ರಕಾರ 3 ತಿಂಗಳ ಸಾದಾ ಶಿಕ್ಷೆ, 500 ರೂ ದಂಡವನ್ನು ವಿಧಿಸಿ ನಿನ್ನೆ (ಮಾರ್ಚ್ 28, ಶುಕ್ರವಾರ) ತೀರ್ಪು ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಮಂಜುನಾಥ. ಸಿ., ಇವರು ವಾದ ಮಂಡಿಸಿದ್ದರು.

