ಸುದ್ದಿಒನ್, ಚಿತ್ರದುರ್ಗ, ಜನವರಿ. 24 : ನಗರದ ಬಿ.ಡಿ. ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು 12 ಕ್ಕೂ ಹೆಚ್ಚು ಶಾಲಾ ಮಕ್ಕಳು ಗಾಯಗೊಂಡಿದ್ದಾರೆ.
ನಗರದ ಬಿ.ಡಿ.ರಸ್ತೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೆಎಸ್ಆರ್ಟಿಸಿ ಡಿಪೋ ಒಳಗಿನಿಂದ ಮುಖ್ಯ ರಸ್ತೆಗೆ ಬಸ್ ಬರುತ್ತಿತ್ತು. ಈ ವೇಳೆ ಶರಣ ಬಸವೇಶ್ವರ ಶಾಲಾ ಮಕ್ಕಳನ್ನು ಸ್ಟೇಡಿಯಂಗೆ ಕರೆದುಕೊಂಡು ಹೋಗುತ್ತಿದ್ದ ಆಪೇ ವಾಹನವು ಬಸ್ ಗೆ ಡಿಕ್ಕಿ ಹೊಡೆದಿದೆ. ಆಟೋ ಮಗುಚಿಬಿದ್ದು ವಾಹನದಲ್ಲಿದ್ದ ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣವೇ ಅಲ್ಲಿದ್ದ ಸ್ಥಳೀಯರು ಶಾಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಣರಾಜ್ಯೋತ್ಸವ ಪರೇಡ್ ಪೂರ್ವ ತಯಾರಿ ಅಂಗವಾಗಿ ಶಾಲಾ ಮಕ್ಕಳು ಶರಣ ಬಸವೇಶ್ವರ ಶಾಲೆಯಿಂದ ಒನಕೆ ಓಬವ್ವ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪ್ರಕರಣ ದಾಖಲಿಸಲಾಗಿದೆ.
ಆಸ್ಪತ್ರೆಗೆ ಎಸ್.ಪಿ. ರಂಜಿತ್ ಕುಮಾರ್ ಬಂಡಾರು, ಅಡಿಷನಲ್ ಎಸ್.ಪಿ. ಡಾ. ಶಿವಕುಮಾರ್, ಡಿಡಿಪಿಐ, ಬಿಇಓ ಸೇರಿದಂತೆ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






