ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.20 : ಇತ್ತಿಚಿನ ದಿನಗಳಲ್ಲಿ ಮೊಬೈಲ್ ಯುಗದಿಂದ ಸಾಕಷ್ಟು ಯುವಕರ ಮನಸ್ಸು ಖಿನ್ನತೆಗೆ ಒಳಗಾಗುತ್ತಿದೆ. ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಮೊಬೈಲ್ ಇದ್ದರೆ ಸಾಕು, ಪ್ರಪಂಚವೇ ಅದಾಗಿ ಬಿಡುತ್ತಿದೆ. ಮೊಬೈಲ್ ಕೊಡಿಸದೆ ಹೋದಲ್ಲಿ ಮಕ್ಕಳ ಹಠ ಸಹಿಸುವುದಕ್ಕೆ ಆಗಲ್ಲ. ಇದೀಗ ಕೋಟೆನಾಡು ಚಿತ್ರದುರ್ಗದಲ್ಲೊಂದು ದಾರುಣ ಘಟನೆ ನಡೆದಿದೆ.
ಅಜ್ಜ ಮೊಬೈಲ್ ಕೊಡಿಸಲಿಲ್ಲವೆಂದು ಮೊಮ್ಮಗ ಸಾವನ್ನಪ್ಪಿರುವ ಘಟನೆ, ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕೊಳಾಲ್ ಗ್ರಾಮದಲ್ಲಿ ನಡೆದಿದೆ. 20 ವರ್ಷದ ಯಶವಂತ್ ಮೃತ ದುರ್ದೈವಿ.
ಯಶವಂತ್ ಬಳಿ ಈ ಹಿಂದೆ ಮೊಬೈಲ್ ಇತ್ತು. ಅದನ್ನ ಗಣೇಶ ವಿಸರ್ಜನೆ ವೇಳೆ ಕಳೆದುಕೊಂಡಿದ್ದಾನೆ. ಅಂದಿನಿಂದ ಹೊಸ ಮೊಬೈಲ್ ಗಾಗಿ ತಾತನ ಬಳಿ ಬೇಡಿಕೆ ಇಟ್ಟಿದ್ದನಂತೆ. ಆದರೆ ತಾತ, ತಕ್ಷಣಕ್ಕೆ ಮೊಬೈಲ್ ಕೊಡಿಸಲು ಆಗಲ್ಲ, ಈರುಳ್ಳಿ ಬೆಳೆ ಮಾರಿದ ಮೇಲೆ ಕೊಡಿಸುತ್ತೀನಿ ಎಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಅಕ್ಟೋಬರ್ 18 ರಂದು ಯಶವಂತ್ ಮನೆಯಲ್ಲಿಯೇ ರಾಸಾಯನಿಕ ಸೇರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿದ ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ, ಗುರುವಾರ ದಾವಣಗೆರೆಗೆ ಸಾಗಿಸುವ ಪ್ರಯತ್ನ ನಡೆದಿದೆ. ಆದರೆ ಮಾರ್ಗ ಮಧ್ಯದಲ್ಲಿಯೇ ಯಶವಂತ್ ಸಾವನ್ನಪ್ಪಿದ್ದಾನೆ. ತಾತನಿಗೆ ಮೊಮ್ಮಗನನ್ನು ಕಳೆದುಕೊಂಡ ದುಃಖ ಮುಗಿಲು ಮುಟ್ಟಿದೆ.
ಮಕ್ಕಳನ್ನ ಮೊಬೈಲ್ ಗೀಳು ಎಷ್ಟರಮಟ್ಟಿಗೆ ಎಳೆದುಕೊಂಡು ಹೋಗುತ್ತಿದೆ ನೋಡಿ. ಇದು ಆತಂಕದ ವಿಚಾರವೇ ಸರಿ. ಮೊಬೈಲ್ ಹಾಳು ಮಾಡುತ್ತದೆ, ಉದ್ಧಾರ ಆಗುವುದಕ್ಕೆ ಸಹಾಯವನ್ನು ಮಾಡುತ್ತದೆ. ಬಳಕೆದಾರರಲ್ಲಿರುವ ಪ್ರಬುದ್ಧತೆ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತದೆ. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.