ಸುದ್ದಿಒನ್, ಚಿತ್ರದುರ್ಗ, ಜ. 26 : ನಗರದ ಎಸ್.ಜೆ.ಎಂ. ಕ್ಯಾಂಪಸ್ ಆವರಣದಲ್ಲಿ ಎಸ್.ಜೆ.ಎಂ. ಸಮೂಹ ಸಂಸ್ಥೆಗಳ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತ, ಈ ದಿನ ಅತ್ಯಂತ ಪವಿತ್ರವಾದ ದಿನ. ವಿದೇಶಿಯರ ಸಂಕೋಲೆಯಿಂದ ಕಳಚಿ ನಮ್ಮದೇ ಆದ ಪ್ರಜಾಪ್ರಭುತ್ವವನ್ನು ಪಡೆದುಕೊಂಡ ದಿನ. ಸುಮಾರು 2ವರ್ಷಗಳ ಕಾಲ ರಚನೆಗೊಂಡ ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಂಡ ದಿನ. ದೇಶದ ಪ್ರಜೆಗಳೇ ಪ್ರಭುಗಳು ಎಂದು ಸಾರುವ ಮಹತ್ವದ ದಿನವಾಗಿದೆ ಎಂದರು.
ನಮ್ಮ ದೇಶವು ವಂಶ ಪಾರಂಪರ್ಯದ ರಾಜಪ್ರಭುತ್ವವನ್ನು ಒಪ್ಪದೆ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡಿದೆ. ಸಂಕೀರ್ಣತೆಯ ನಡುವೆ ಭಿನ್ನಾಭಿಪ್ರಾಯಗಳ ನಡುವೆ ರಾಷ್ಟ್ರೀಯತೆಯನ್ನು ಮೆರೆದ ಪರಂಪರೆ ನಮ್ಮದು. ಶೈಕ್ಷಣಿಕವಾಗಿ, ಸಾಂಸ್ಕøತಿಕ, ವೈಜ್ಞಾನಿಕವಾಗಿ ದೇಶವಿಂದು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಎಸ್.ಜೆ.ಎಂ. ವಿದ್ಯಾಪೀಠವು ಸಹ ಗುರು ಹಿರಿಯರ ದೂರದೃಷ್ಟಿಯಿಂದ 50ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ರಾಜ್ಯಸಭೆ ಮಾಜಿ ಸದಸ್ಯರೂ ಆದ ಹನುಮಂತಪ್ಪನವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ನಾನು ಹುಟ್ಟಿದಾಗ ಸ್ವಾತಂತ್ರ್ಯ ಬಂದಿರಲಿಲ್ಲ. ಹಾಗಾಗಿ ನಾನು ಬ್ರಿಟೀಷರ ಪ್ರಜೆಯಾದರೆ ಇಂದಿನ ನೀವೆಲ್ಲ ಸ್ವಾತಂತ್ರ್ಯ ಭಾರತದ ಪ್ರಜೆಗಳು. ಸ್ವಾತಂತ್ರ್ಯ ಬಂದಾದ ಮೇಲೆ ಎಲ್ಲರಿಗೂ ಆಹಾರ ಸಿಗುತ್ತಿದೆ. 140 ಕೋಟಿ ಜನರನ್ನು ಈ ದೇಶ ಸಾಕುತ್ತಿದೆ. ಸಾವಿರಾರು ಜನರ ಬಲಿದಾನಗಳ ಶತಮಾನದ ಹೋರಾಟದ ಫಲವನ್ನು ಇಂದಿನ ತಲೆಮಾರು ಅನುಭವಿಸುತ್ತಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊಡ್ಡದುರುಗಪ್ಪ ಕುರುಮರಡಿಕೆರೆ, ಎನ್. ಭೀಮಪ್ಪ ಕೂನಬೇವು, ಹನುಮಂತಪ್ಪ ಮರಡಿಹಳ್ಳಿ, ಗೋವಿಂದಪ್ಪ ಕೋವೇರಹಟ್ಟಿ, ಭೀಮಪ್ಪ ಮರಡಿಹಳ್ಳಿ ಅವರನ್ನು ಸನ್ಮಾನಿಸಲಾಯಿತು
ರಕ್ತದಾನ ಶಿಬಿರ : ಎಸ್.ಜೆ.ಎಂ. ವಿಶ್ವವಿದ್ಯಾಲಯ ಮತ್ತು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ.ಕಳಸದ ಚಾಲನೆ ನೀಡಿದರು.
ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ, ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ಎಂ.ಎಸ್., ಡಾ. ನಾಗೇಂದ್ರಗೌಡ, ಡಾ. ರಾಮು ಎಸ್.ಜೆ.ಎಂ. ವಿದ್ಯಾಪೀಠದ ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರುಗಳು ವೇದಿಕೆಯಲ್ಲಿದ್ದರು. ಬೋಧಕ-ಬೋಧಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ, ಪಿಎಚ್.ಡಿ. ಪದವಿ ಪಡೆದವರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಶಾಲು ಹೊದಿಸಿ ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆಯ 18 ಶಾಲಾಕಾಲೇಜುಗಳ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ಅತ್ಯುತ್ತಮ ಪಥ ಸಂಚಲನ ಪ್ರದರ್ಶಿಸಿದ ಪ್ರೌಢಶಾಲಾ ವಿಭಾಗದಲ್ಲಿ ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ – ಪ್ರಥಮ, ಎಸ್.ಜೆ.ಎಂ. ಕನ್ನಡ ಮಾಧ್ಯಮ ಶಾಲೆ – ದ್ವಿತೀಯ ಮತ್ತು ಎಸ್.ಜೆ.ಎಂ. ಬೃಹನ್ಮಠ ಪ್ರೌಢಶಾಲೆ – ತೃತೀಯ ಹಾಗೂ ಕಾಲೇಜು ವಿಭಾಗದಲ್ಲಿ ಎಸ್.ಜೆ.ಎಂ. ನರ್ಸಿಂಗ್ ಕಾಲೇಜು – ಪ್ರಥಮ, ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಚಂದ್ರವಳ್ಳಿ – ದ್ವಿತೀಯ ಮತ್ತು ಎಸ್.ಜೆ.ಎಂ. ಫಾರ್ಮಸಿ ಕಾಲೇಜು – ತೃತೀಯ ಬಹುಮಾನ ನೀಡಲಾಯಿತು.
ನಂತರ ಶ್ರೀಮಠದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ನವೀಕೃತ ಕಛೇರಿಯನ್ನು ಅಧ್ಯಕ್ಷರು ಉದ್ಘಾಟಿಸಿ, ಗೋಡೆ ಕ್ಯಾಲೆಂಡರ್, ಪಾಕೆಟ್ ಕ್ಯಾಲೆಂಡರ್ ಹಾಗು ಡೈರಿಯನ್ನು ಬಿಡುಗಡೆ ಮಾಡಿದರು. ಹರ್ಷವರ್ಧನ – ಗೌರವ ಜಯದೇವ್ ಕಾರ್ಯಕ್ರಮ ನಿರೂಪಿಸಿದರು.







