ಚಿತ್ರದುರ್ಗ | ಗಾಂಜಾ ಸೊಪ್ಪು ಗಿಡಗಳ ಬೆಳೆದ ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ

1 Min Read

 

ಚಿತ್ರದುರ್ಗ. ಫೆ.19: ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪು ಗಿಡಗಳನ್ನು ಬೆಳೆದ ಇಬ್ಬರು ಆರೋಪಿಗಳಿಗೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ಹೊಸೂರು ಭೋವಿಹಟ್ಟಿ ಗ್ರಾಮದಲ್ಲಿ ಆರೋಪಿತರಾದ ಯಲ್ಲಪ್ಪ ತಂದೆ ತಿಮ್ಮಾಭೋವಿ ಮತ್ತು ಚಂದ್ರಮ್ಮ ಕೋಂ ಗೋವಿಂದಪ್ಪ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಮಾದಕ ವಸ್ತುವಾದ 8 ಕೆ.ಜಿ. 500 ಗ್ರಾಂ ತೂಕವಿರುವ ಹೂವು, ಬೀಜ ಹಾಗೂ ಕಾಂಡದಿಂದ ಕೂಡಿದ ಘಾಟು ವಾಸನೆಯುಳ್ಳ ಗಾಂಜಾ ಸೊಪ್ಪನ್ನು ಬೆಳೆಸಿರುವುದರ ಬಗ್ಗೆ ಮಾಹಿತಿ ಪಡೆದು, ಹೊಸದುರ್ಗದ ಅಬಕಾರಿ ಉಪನಿರೀಕ್ಷಕ ಎ.ಜೆ. ನಾಗರಾಜ ಅವರು ಗಾಂಜಾ ಸೊಪ್ಪು ವಶಕ್ಕೆ ಪಡೆದು, ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆಯ ನಂತರ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ ಅವರು ಕಲಂ: 20(ಎ)(ಐ) ಎನ್.ಡಿ.ಪಿ.ಎಸ್. ಆಕ್ಟ್ ನಡಿ ಆರೋಪಿತರಾದ ಯಲ್ಲಪ್ಪ ಅವರಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ಹಾಗೂ ಎರಡನೆ ಆರೋಪಿಯಾದ ಚಂದ್ರಮ್ಮ ಅವರಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಬುಧವಾರದಂದು ತೀರ್ಪು ನೀಡಿದ್ದಾರೆ.

ಪ್ರಧಾನ ಸರ್ಕಾರಿ ಅಭಿಯೋಜಕರಾದ ಬಿ. ಗಣೇಶ ನಾಯ್ಕ ಅವರು ವಿಚಾರಣೆ ನಡೆಸಿ, ಸರ್ಕಾರದ ಪರ ವಾದ ಮಂಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks