ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಆ.12): ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಅಭಿವೃದ್ದಿಗಾಗಿ ಬಿಡುಗಡೆಯಾಗುತ್ತಿರುವ ಕೋಟ್ಯಾಂತರ ರೂ.ಗಳು ಪರಿಶಿಷ್ಟ ಜನಾಂಗದ ಮುಖಂಡರುಗಳಿಂದಲೆ ವಂಚನೆಯಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ತಕ್ಷಣವೆ ಬಂಧಿಸಿ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ದಾವಣಗೆರೆ ಜಿಲ್ಲಾಧ್ಯಕ್ಷ ಚಿನ್ನಸಮುದ್ರ ಶೇಖರ್ ನಾಯ್ಕ್ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ 24 ಕೋಟಿ ರೂ.ಗಳ ಅವ್ಯವಹಾರವಾಗಿದ್ದು, ಮಾರ್ಗಸೂಚಿಯಲ್ಲಿ ನಿಗಧಿಪಡಿಸಿರುವ ದಾಖಲೆಗಳನ್ನು ಪರಿಶೀಲಿಸದೆ 25 ಸಂಘ ಸಂಸ್ಥೆಗಳು, ಟ್ರಸ್ಟ್‍ಗಳು, ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ವಿದ್ಯಾರ್ಥಿನಿಲಯಗಳು, ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ವಿರುದ್ದ ಶಿಸ್ತಿನ ಕ್ರಮ ಕೈಗೊಂಡು ಸಹಾಯಧನ ಪಡೆದಿರುವ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಿರುವ ಎಲ್ಲಾ ಸಂಸ್ಥೆಗಳಿಂದ ಹಣ ಬಿಡುಗಡೆಯಾದ ದಿನದಿಂದ ಶೇ.10 ರಷ್ಟು ಬಡ್ಡಿಯನ್ನು ಸೇರಿಸಿ ವಸೂಲಾತಿಗೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುವಂತೆ ಚಿನ್ನಸಮುದ್ರ ಶೇಖರ್‍ನಾಯ್ಕ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮೇಲ್ಜಾತಿಗೆ ಸೇರಿದ ಜಿಲ್ಲೆಯ ಮಠಾಧೀಶರೊಬ್ಬರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸಿಗಬೇಕಾದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಈ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಎಸ್ಸಿ.ಎಸ್ಟಿ.ದೌರ್ಜನ್ಯ ತಡೆ ಕಾಯಿದೆಯಡಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ 25 ಸಂಘ ಸಂಸ್ಥೆಗಳು, ಟ್ರಸ್ಟ್ ಗಳು, ಧಾರ್ಮಿಕ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಇಲ್ಲವಾದಲ್ಲಿ ಮುಂದೆ ಹೋರಾಟ ನಡೆಸಲಾಗುವುದೆಂದು ಚಿನ್ನಸಮುದ್ರ ಶೇಖರ್ ನಾಯ್ಕ್ ಎಚ್ಚರಿಸಿದರು.