ಬೆಂಗಳೂರು: ಕೊರೊನಾ ಎಂಬ ಮಹಾಮಾರಿಯನ್ನ ಹುಟ್ಟು ಹಾಕಿದ್ದು ಚೀನಾ. ಇಡೀ ದೇಶವನ್ನೇ ತಲ್ಲಣಗೊಳಿಸಿಬಿಟ್ಟಿತು. ಆರ್ಥಿಕವಾಗಿ ಕುಸಿತವಾಯಿತು. ಅದೆಷ್ಟೋ ಕುಟುಂಬಗಳು ಅನಾಥವಾದವು. ಅದ್ಯಾವುದನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈಗ ನೋಡಿದ್ರೆ ಚೀನಾದಿಂದ ಮತ್ತೊಂದು ವೈರಸ್ ಸದ್ದು ಮಾಡುತ್ತಿದೆ. ಹ್ಯೂಮನ್ ಮೆಟಾನ್ಯುಮೋವೈರಸ್. ಇದೀಗ ಈ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿರುವುದು ಆತಂಕ ಸೃಷ್ಟಿಸಿದೆ.
ಹೌದು ಬೆಂಗಳೂರಿನಲ್ಲಿ ಮಗುವಿನ ದೇಹದಲ್ಲಿ ಈ ವೈರಸ್ ಪತ್ತೆಯಾಗಿದೆ. ಎಂಟು ತಿಂಗಳ ಮಗುವಿಗೆ HMPV ಸೋಂಕು ತಗುಲಿರುವುದು ದೃಢವಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಯೂ ಸೂಚನೆ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ, ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದೆ. ಮಗುವಿನ ಮೇಲೆ ನಿಗಾವಹಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ವೈರಸ್ ನ ಗುಣಲಕ್ಷಣಗಳನ್ನು ನೋಡೋಣಾ:
* ಈ ವೈರಸ್ ತಗುಲಿದವರಲ್ಲಿ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಳ್ಳುತ್ತದೆ.
* ಮೂಗು ಸೋರುವುದು, ಗಂಟಲು ಕೆರೆತ, ಅತಿಯಾದ ಕೆಮ್ಮು, ಉಸಿರಾಟದ ಸಮಸ್ಯೆ, ದೇಹದಲ್ಲಿ ಇದ್ದಕ್ಕಿದ್ದ ಹಾಗೇ ದದ್ದುಗಳು ಕಾಣಿಸಿಕೊಳ್ಳುವುದಕ್ಕೂ ಶುರುವಾಗುತ್ತದೆ.
* ನವಶಿಶುಗಳು, ಹಿರಿಯರು, ಉಸಿರಾಟದ ಸಮಸ್ಯೆ ಇರುವವರು, ಚಿಕ್ಕಮಕ್ಕಳು, ಹೃದಯ ಸಮಸ್ಯೆ ಹೊಂದಿರುವವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ವೈರಸ್ ಬೇಗನೇ ಪರಿಣಾಮ ಬೀರುತ್ತದೆ. ಹೀಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
* ಕೊರೊನಾ ಸಮಯದಲ್ಲಿ ಪಾಲಿಸಿದ ನಿಯಮಗಳನ್ನೇ ಹೆಚ್ಚಾಗಿ ಪಾಲಿಸಿ. ಮಾಸ್ಕ್ ಧರಿಸುವುದು, ಸ್ವಚ್ಛತೆಯನ್ನು ಕಾಪಾಡುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು, ತರಕಾರಿಗಳನ್ನು ತಿನ್ನುವುದು, ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಈ ವೈರಸ್ ಗಳು ದೇಹ ಸೇರಿದರು ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ನಮ್ಮ ದೇಹದಲ್ಲಿಯೇ ಹೋರಾಡುವ ಜೀವ ಕಣಗಳು ಸ್ಟ್ರಾಂಗ್ ಆಗಿ ಇಲ್ಲದೆ ಹೋದರೆ ವೈರಸ್ ಗಳ ಶಕ್ತಿಯೇ ಮೇಲುಗೈ ಆಗುತ್ತದೆ.