ಅಣ್ಣನ ಮಕ್ಕಳಿಗೂ ಆಸ್ತಿ ಬರೆದಿದ್ದ ತಂದೆಯನ್ನ ಇರಿದು ಕೊಂದ ಪಾಪಿ ಮಕ್ಕಳು..!

1 Min Read

ಬೆಂಗಳೂರು: ಹಣ.. ಆಸ್ತಿ ಅಂದ್ರೆ ಯಾವ ಸಂಬಂಧವೂ ಲೆಕ್ಕಕ್ಕೆ ಬರಲ್ಲ. ಅದಕ್ಕೊಂದು ಉದಾಹರಣೆ ಬೆಂಗಳೂರಲ್ಲಿ ನಡೆದಿದೆ. ಆಸ್ತಿಗಾಗಿ ಮಕ್ಕಳೇ ತಂದೆಯನ್ನ ಕೊಂದಿರುವ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಶುರುವಾದ ಜಗಳದಲ್ಲಿ ತಂದೆಯ ಕೊಲೆಯಾಗಿದೆ. ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಮೋಹನ್ ಕುಮಾರ್ ರನ್ನ ಈಗಾಗಲೇ ಬಂಧಿಸಿದ್ದು, ಇನ್ನೊಬ್ಬ ಮಗ ಗಜೇಂದ್ರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮುನಿಕೃಷ್ಣ ಕೊಲೆಯಾದ ದುರ್ದೈವಿ. ಇವರು ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ನಿವೃತ್ತಿ ಜೀವನವನ್ನ ಕಳೆಯುತ್ತಿದ್ದರು. ದುಡಿದ ಹಣದಲ್ಲಿ ಧೂಪನಗರದಲ್ಲಿ 6 ಕೋಟಿ ಮೌಲ್ಯದ ಮೂರು ಕಟ್ಟಡಗಳನ್ನ ಹೊಂದಿದ್ದರು. ಈ ಆಸ್ತಿಯನ್ನ ಅದಾಗಲೇ ಹಂಚಿ ವಿಲ್ ಮಾಡಿದ್ದರು. ಎರಡು ಕಟ್ಟಡಗಳನ್ನ ಮೊಮ್ಮಕ್ಕಳ ಹೆಸರಲ್ಲಿ, ಇನ್ನೊಂದು ಕಟ್ಟಡವನ್ನು ತಮ್ಮನ ಮಕ್ಕಳ ಹೆಸರಿಗೆ ಬರೆದಿದ್ದರು. ಈ ವಿಚಾರವೇ ಮಕ್ಕಳ ಕೋಪಕ್ಕೆ ಕಾರಣವಾಗಿದೆ. ಇದರಿಂದಾನೇ ಜಗಳಗಳು ಶುರುವಾಗಿದೆ.

ಆಸ್ತಿಯನ್ನ ನೀನು ಮಾಡಿ, ತಮ್ಮನ ಮಕ್ಕಳ ಹೆಸರಿಗೆ ಯಾಕೆ ಬರೆದಿರೋದು ಎಂಬ ವಿಚಾರದ ಬಗ್ಗೆ ಚರ್ಚೆಯಾಗಿದೆ. ಮಾತಿಗೆ ಮಾತು ಬೆಳೆದಿದೆ. ಈ ಜಗಳದ ನಡುವೆ ಮಕ್ಕಳು ಕಬ್ಬಿಣದ ರಾಡ್ ನಿಂದ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ. ಮಕ್ಕಳಿಗೆ ಹೆದರಿಸೋದಕ್ಕೆ ಹೋದ ಮುನಿಕೃಷ್ಣ, ಒಳಗೆ ಹೋಗಿ ಚಾಕು ತಂದಿದ್ದಾರೆ. ಆದರೆ ದುರದೃಷ್ಟವಶಾತ್ ಅದೇ ಚಾಕು ತೆಗೆದುಕೊಂಡು ಮಕ್ಕಳು, ತಂದೆಯನ್ನೇ ಇರಿದಿದ್ದಾರೆ. ಇದರಿಂದ ಮುನಿಕೃಷ್ಣ ಸಾವನ್ನಪ್ಪಿದ್ದಾರೆ. ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share This Article
Enable Notifications OK No thanks