ಮಕ್ಕಳಿಗೆ ಮನೆ, ಕುಟುಂಬ ಎನ್ನುವ ಸಂಸ್ಕೃತಿ ಕಲಿಸಬೇಕು : ಲೋಕಾಯುಕ್ತ ಎಸ್.ಪಿ. ಎನ್.ವಾಸುದೇವರಾಮ

2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 28 : ಮುಪ್ಪಿನ ಕಾಲದಲ್ಲಿ ತಂದೆ ತಾಯಿಗಳನ್ನು ಮಕ್ಕಳು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷಿಸುತ್ತಿರುವುದರಿಂದ ಸರ್ಕಾರದ ಅನೇಕ ಸೌಲಭ್ಯಗಳು ಹಿರಿಯ ನಾಗರೀಕರಿಗೆ ಸಿಗಬೇಕೆಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಬಸವೇಶ್ವರ ವಿದ್ಯಾಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ನಾಗರೀಕರ ಸಹಾಯವಾಣಿ ಕೇಂದ್ರ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಬುಧವಾರ ನಡೆದ ಹಿರಿಯ ನಾಗರೀಕರ ಮತ್ತು ವಿಕಲಚೇತನರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಹಿರಿಯ ನಾಗರೀಕರಿಗೆ ಸರ್ಕಾರದಿಂದ ಏಕೆ ಸೌಲಭ್ಯ ಕೊಡಬೇಕು ಎನ್ನುವ ಪ್ರಶ್ನೆ ಉದ್ಬವವಾಗಿದೆ. ಮಕ್ಕಳಿಂದ ತಿರಸ್ಕಾರಕ್ಕೊಳಗಾಗುವ ತಂದೆ ತಾಯಿಗಳಿಗೆ ಸರ್ಕಾರದ ಸೌಲಭ್ಯಗಳು ನೆರವಿಗೆ ಬರುತ್ತವೆ. ಮನೆ, ಕುಟುಂಬ ಎನ್ನುವ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕೆಂದರು.

ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ ಹಿರಿಯ ನಾಗರೀಕರು ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಬೇಕಾದರೆ ಗುರುತಿನ ಚೀಟಿ ಅತ್ಯವಶ್ಯಕ. ಅರವತ್ತು ವರ್ಷವಾಗಿದೆ ಎಂದು ಬಾಯಲ್ಲಿ ಹೇಳಿದರೆ ನಂಬುವುದು ಕಷ್ಟ. ಅದಕ್ಕಾಗಿ ಹಿರಿಯ ನಾಗರೀಕರು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಭಾರತಿ ಆರ್.ಬಣಕಾರ್ ಮಾತನಾಡುತ್ತ ಹಿರಿಯ ನಾಗರೀಕರಿಗೆ ಈಗಾಗಲೆ ಸರ್ಕಾರ ಅನೇಕ ಸೌಲಭ್ಯಗಳನ್ನು ಕೊಡುತ್ತಿದೆ. ವಯಸ್ಸಾದ ತಂದೆ-ತಾಯಿಯನ್ನು ಮಕ್ಕಳು ಕೀಳಾಗಿ ನೋಡುತ್ತಿರುವುದರಿಂದ ವೃದ್ದಾಶ್ರಮಗಳು ಜಾಸ್ತಿಯಾಗುತ್ತಿವೆ. ಹಿರಿಯ ನಾಗರೀಕರಿಗೆ ಏನೆ ತೊಂದರೆಯಾದರೂ ರಕ್ಷಣೆ ಕೊಡಬೇಕು. ಹಿರಿಯರು ಮಕ್ಕಳ ಒಳಿತಿಗಾಗಿ ಜೀವ ಸವೆಸುತ್ತಾರೆ. ವಿಪರ್ಯಾಸವೆಂದರೆ ಇಂದಿನ ಮಕ್ಕಳಲ್ಲಿ ಸಂಸ್ಕøತಿ, ಸಂಸ್ಕಾರ ಎನ್ನುವುದು ಕಳೆದು ಹೋಗುತ್ತಿದೆ. ಮಿತವಾದ ವ್ಯಾಯಾಮ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ವಿ.ಕೆ.ಶಂಕರಪ್ಪ ಮಾತನಾಡಿ ಹಿರಿಯ ನಾಗರೀಕರಿಗೆ, ವಿಶೇಷ ಚೇತನರಿಗೆ ಸಮಾಜದ ಕಟ್ಟಕಡೆಯವರಿಗೆ ಸರ್ಕಾರದ ಸವಲತ್ತುಗಳು ಸಿಗಬೇಕಾದರೆ ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕು. ಕಳೆದ 26 ವರ್ಷಗಳಿಂದಲೂ ವಿಕಲಚೇತನರು ಹಾಗೂ ಹಿರಿಯ ನಾಗರೀಕರಿಗೆ ಸೇವೆ ಸಲ್ಲಿಸುತ್ತ ಬರುತ್ತಿದ್ದೇವೆ. ಹದಿನೈದು ವಿಕಲಚೇತರನ್ನು ಬೆಂಗಳೂರಿನ ಇನ್‍ಫೋಸಿಸ್‍ನಲ್ಲಿ ಕೆಲಸಕ್ಕೆ ಸೇರಿಸಲಾಗಿದೆ. ಮಕ್ಕಳಿಂದ ತೊಂದರೆ ಅನುಭವಿಸುತ್ತಿರುವ ಹಿರಿಯ ನಾಗರೀಕರಿಗೆ ನಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡುತ್ತಿದ್ದೇವೆಂದು ಹೇಳಿದರು.

ಲೋಕಾಯುಕ್ತ ಡಿ.ವೈ.ಎಸ್ಪಿ. ಎನ್.ಮೃತ್ಯುಂಜಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಸಿ.ಸೋಮಶೇಖರ, ಶ್ರೀಮತಿ ಪ್ರಭಾವತಿ ಎಸ್.ಕೆ. ಉಪ ವಿಭಾಗಾಧಿಕಾರಿ ಕಚೇರಿಯ ರಾಮಪ್ರಸಾದ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *