ಸುದ್ದಿಒನ್, ಚಿತ್ರದುರ್ಗ : ಕನ್ನಡ ಸಾಹಿತ್ಯ ಮತ್ತು ಪರಂಪರೆಯ ಬಗ್ಗೆ ಮಕ್ಕಳು ಆಸಕ್ತಿ ಹೊಂದಬೇಕು. ಸರ್ಕಾರದಿಂದ ನಡೆಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಪರಿಪೂರ್ಣತೆಯಿಂದ ಭಾಗವಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಇಂಗಳದಾಳ್ ಗ್ರಾಮದ ತಳವಾರ ಸಂಚಲಪ್ಪ ಪ್ರೌಢಶಾಲೆ ಆವರಣದಲ್ಲಿ ಬುಧವಾರ ನಡೆದ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ಕನ್ನಡಗೀತೆಗಳ ಗಾಯನತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡನಾಡು ಕರ್ನಾಟಕ ಸಂಭ್ರಮ-50 ಆಚರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವಪೀಳಿಗೆಗೆ ಒದಗಿದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕನ್ನಡನಾಡು, ನುಡಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪಠ್ಯಾಧಾರಿತ ವಿಷಯಗಳನ್ನು ಪರಸ್ಪರ ಚರ್ಚಿಸಬೇಕು. ಜೊತೆಗೆ 18 ವರ್ಷ ತುಂಬಿದ ಯುವಕ ಮತ್ತು ಯುವತಿಯರು ಕಡ್ಡಾಯವಾಗಿ ಮತದಾನ ಪಟ್ಟಿಯಲ್ಲಿ ಹೆಸರುಗಳನ್ನು ನೊಂದಾಯಿಸಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಮಾಜಿಕವಾಗಿ ಜಾಗೃತಿ ಮೂಡಿಸಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಹುರುಳಿ ಬಸವರಾಜ್ ಕನ್ನಡ ನಾಡಿನ ಸಾಹಿತ್ಯ ಸಂಪತ್ತು ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿ ಕನ್ನಡವೆಂದರೆ ಸಾಂಸ್ಕøತಿಕ ಬದುಕಿನ ಸಂಕೀರ್ಣ ಭಾಷೆಯಾಗಿದೆ. ಸಾಹಿತ್ಯ ಚರಿತ್ರೆಯಲ್ಲಿ ಕನ್ನಡ ತನ್ನದೇ ಆದ ಮೈಲುಗಲ್ಲುಗಳನ್ನು ದಾಟಿ ದಾಖಲೆ ನಿರ್ಮಿಸಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕನ್ನಡದ ಸಂಸ್ಕøತಿ ಅತ್ಯಂತ ಶ್ರೀಮಂತಿಯನ್ನು ಮೆರೆದಿರುವುದು ನಮ್ಮೆಲ್ಲರ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ಅಪಾರ ಜ್ಞಾನಸಂಪತ್ತು ನಿಮ್ಮದಾಗುತ್ತದೆ. ಕಾಲಹರಣ ಮಾಡದೆ ಅನೇಕ ಸಾಹಿತಿಗಳ ಜೀವನ ಚರಿತ್ರೆ ಹಾಗೂ ಸಾಹಿತ್ಯಗಳನ್ನು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವ ರಂಗಸೌರಭ ಕಲಾ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ತಳವಾರ ಸಂಚಲಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಪಿ.ಆನಂದಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಉಪಯುಕ್ತವಾಗುವ ಪಠ್ಯಾಧಾರಿತ ಕಾರ್ಯಕ್ರಮಗಳಿಗೆ ನಮ್ಮ ಶಾಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಗ್ರಾಮೀಣ ಮಟ್ಟದ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳಿಂದ ಬೌದ್ಧಿಕಮಟ್ಟ ಹೆಚ್ಚಾಗುತ್ತದೆ. ಓದುವ ಸ್ಪೂರ್ತಿ ಹೆಚ್ಚಾದಂತೆ ದೇಶದ ಭವಿಷ್ಯತ್ತಿಗೆ ಮಕ್ಕಳು ಮಾದರಿಯಾಗುತ್ತಾರೆ ಎಂದರು.
ಕನ್ನಡ ಪಂಡಿತ ಜಿ.ವಿ.ತೇಜಸ್ವಿ, ಶಿಕ್ಷಕರಾದ ಆರ್.ರುದ್ರಸ್ವಾಮಿ, ಹೆಚ್.ಧನಂಜಯ, ಎಂ.ರಂಗನಾಥ್, ನಿವೃತ್ತ ಶಿಕ್ಷಕರಾದ ಡಿ.ಆರ್.ಚಕ್ರಪಾಣಿ ಮತ್ತು ಕೆ.ಆದಪ್ಪಸ್ವಾಮಿ, ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ವಸಂತಮ್ಮ, ಪ್ರಕಾಶ್ ಬಾದರದಿನ್ನಿ, ಯೋಗಶಿಕ್ಷಕ ಎಂ.ಬಿ.ಮುರುಳಿ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ನೀನಾಸಂ ಪದವೀಧರ ಹಾಗೂ ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕನ್ನಡ ಗೀತಗಾಯನ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಳವಾರ ಸಂಚಲಪ್ಪ ನಾಯಕರ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ಕಾರ ನಿಗಧಿಪಡಿಸಿದ ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಕುವೆಂಪು ವಿರಚಿತ ಎಲ್ಲಾದರು ಇರು ಎಂತಾದರು ಇರು, ದ.ರಾ.ಬೇಂದ್ರೆಯವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ಧಯ್ಯ ಪುರಾಣಿಕ ಬರೆದ ಹೊತ್ತಿತೋ ಹೊತ್ತಿತೂ ಕನ್ನಡದ ದೀಪ, ಚನ್ನವೀರ ಕಣವಿಯವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡದ ಧ್ವನಿಮುದ್ರಿತ ಗೀತೆಗಳನ್ನು ಹಾಡುವ ತರಬೇತಿ ನೀಡಿದರು.
ತಳವಾರ ಸಂಚಲಪ್ಪ ನಾಯಕರ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಪಂಕಜ.ಎ ಮತ್ತು ಎಸ್.ವೇದ ಪ್ರಾರ್ಥಿಸಿದರು. ಲಕ್ಷ್ಮೀ.ಆರ್ ಸ್ವಾಗತಿಸಿದರು. ಲಾವಿಕ.ಬಿ ನಿರೂಪಿಸಿದರು. ಎಂ.ಅನುಷಾ ವಂದಿಸಿದರು.