ಚಿತ್ರದುರ್ಗ. ಡಿ.19: ಪ್ರೌಢ ಹಂತದಿಂದಲೇ ಮಕ್ಕಳಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪೀಪ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಹೇಳಿದರು.
ನಗರದ ಗಾರೆಹಟ್ಟಿಯ ಬೃಹನ್ಮಠ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ (ಸ್ಪೀಪ್) ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪೀಪ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನವರಿ 25 ಇಡೀ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುವುದು. ಇದರ ಅಂಗವಾಗಿ ದೇಶದಲ್ಲಿ ಎಲ್ಲೆಡೆ, 18 ವರ್ಷ ತುಂಬಿದ ಯುವಜನರಿಗೆ ಗುರುತಿನ ಚೀಟಿ ಒದಗಿಸುವುದರ ಮೂಲಕ ಈ ದೇಶದ ಭವಿಷ್ಯದ ಬಗ್ಗೆ ನಿರ್ಧರಿಸುವಂತಹ ಅಧಿಕಾರ ಹಾಗೂ ಶಕ್ತಿಯನ್ನು ಕೊಡುವ ಸಮಯ ಇದಾಗಿದೆ ಎಂದರು.
ಹೀಗಾಗಿಯೇ ಪ್ರೌಢ ಹಂತದಿಂದಲೇ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪೀಪ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಸ್ಪೀಪ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಭಾಗವಹಿಸವರು. ರಾಜ್ಯ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಕಳೆದ 2 ವರ್ಷಗಳಿಂದಲೂ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದರೆ. ಅದೇ ರೀತಿ ಈ ಬಾರಿಯು ಕೂಡ ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ವಿಜೇತರಾಗಬೇಕು ಎಂದು ಉತ್ತೇಜನ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಂಡು, ಗುರುತಿನ ಚೀಟಿ ಪಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಭಾರತದ ಪೌರತ್ವ ಹೊಂದಿರುವ ನಾವು 18 ವರ್ಷ ತುಂಬಿದ ಪ್ರತಿಯೊಬ್ಬರೂ ಭಾರತ ದೇಶದ ಮತದಾರರಾಗುತ್ತೇವೆ, ಪ್ರತಿಯೊಬ್ಬರು ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕು. ಮಕ್ಕಳು ಕನಸು ಕಾಣಬೇಕು, ಕನಸು ನನಸು ಮಾಡಿಕೊಳ್ಳಲು ಪರಿಶ್ರಮ ಹಾಗೂ ಪ್ರಯತ್ನ ಪಡಬೇಕು, ಭವ್ಯ ದೇಶದ ನಿರ್ಮಾಣಕ್ಕಾಗಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಬೇಕು. ಪ್ರಪಂಚದ ಆಗು-ಹೊಗುಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಶಿಕ್ಷಣ ಬಹುಮುಖ್ಯ, ಹೀಗಾಗಿ ತರಬೇತಿ ಕೊಠಡಿಯಲ್ಲಿ ದೇಶದ ಭವಿಷ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಮಟ್ಟದ ಸ್ಪೀಪ್ ಸ್ಪರ್ಧೆಗಳಾದ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳು ಇದೇ ಸಂದರ್ಭದಲ್ಲಿ ಜರುಗಿ, ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಯಿತು.
ಚಿತ್ರಕಲೆ ಸ್ಪರ್ಧೆ: ಹೊಳಲ್ಕೆರೆ ತಾಲ್ಲೂಕಿನ ಎಂ.ಎಂ. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೆಚ್.ಜೆ. ಸ್ಪೂರ್ತಿ-ಪ್ರಥಮ,
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಡಿ.ಹೆಚ್.ಯಶವಂತ್-ದ್ವಿತೀಯ,
ಚಳ್ಳಕೆರೆ ತಾಲ್ಲೂಕಿನ ವಾಸವಿವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ರೀತಿಶ್ ದೊರೆ-ತೃತೀಯ ಸ್ಥಾನ ಪಡೆದರು.
ಪ್ರಬಂಧ ಸ್ಪರ್ಧೆ(ಕನ್ನಡ): ಚಳ್ಳಕೆರೆ ತಾಲ್ಲೂಕಿನ ತಳಕು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಸಿ.ಸ್ನೇಹ-ಪ್ರಥಮ,
ಮೊಳಕಾಲ್ಮೂರು ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪ್ರೌಢಾಶಾಲೆಯ ವಿದ್ಯಾರ್ಥಿನಿ ನೇತ್ರಾವತಿ-ದ್ವಿತೀಯ,
ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ ಕಣಿವೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಎ.ಗೀತಾ-ತೃತೀಯ ಸ್ಥಾನ ಪಡೆದುಕೊಂಡರು.
ಪ್ರಬಂಧ ಸ್ಪರ್ಧೆ(ಇಂಗ್ಲೀಷ್): ಚಿತ್ರದುರ್ಗ ತಾಲ್ಲೂಕಿನ ಕುರುಬರಹಳ್ಳಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಆಲಿಯ ಫವೀಂದ್-ಪ್ರಥಮ,
ಚಳ್ಳಕೆರೆ ತಾಲ್ಲೂಕಿನ ಹೆಚ್.ಜಿ,ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಚನ-ದ್ವಿತೀಯ,
ಹಿರಿಯೂರು ತಾಲ್ಲೂಕಿನ ಹರಿಯಬ್ಬೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಜ್ಞಾನೇಶ್ವರಿ-ತೃತೀಯ ಸ್ಥಾನ ಗಳಿಸಿದರು.
ರಸಪ್ರಶ್ನೆ ಸ್ಪರ್ಧೆ: ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಕೆ.ಪಿ.ಎಸ್. ಶಾಲೆಯ ವಿದ್ಯಾರ್ಥಿನಿ ಹೆಚ್.ಮಮತ, ಪ್ರಿಯ-ಪ್ರಥಮ,
ಹೊಸದುರ್ಗ ತಾಲ್ಲೂಕಿನ ದೇವಪುರದ ಜಿ.ಹೆಚ್.ಎಸ್. ಶಾಲೆಯ ಆರ್.ಚಂದನ, ಎಸ್.ಅಮೂಲ್ಯ-ದ್ವಿತೀಯ,
ಹೊಳಲ್ಕೆರೆ ತಾಲ್ಲೂಕಿನ ಎಂ.ಎಂ ಸರ್ಕಾರಿ ಪ್ರೌಢಶಾಲೆಯ ಕೆ.ಬಿ.ಕೀರ್ತನಾ, ಡಿ.ಎಂ. ಪಲ್ಲವಿ-ತೃತೀಯ ಸ್ಥಾನ ಪಡೆದರು.
ಜಿಲ್ಲಾ ಮಟ್ಟದ ಸ್ಪೀಪ್ ಸ್ಪರ್ಧೆಗಳಲ್ಲಿ ವಿಜೇತರಾದವರು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಂಗ್ಲ ಮತ್ತು ಸಮಾಜ ವಿಷಯದ ವಿಷಯ ಪರಿವೀಕ್ಷಕ ಚಂದ್ರಣ್ಣ, ಸ್ಪೀಪ್ ಸ್ಪರ್ಧೆ ನೋಡಲ್ ಅಧಿಕಾರಿ ಸುಷ್ಮಾ, ಬೃಹನ್ಮಠ ಪ್ರೌಢಶಾಲೆ ದೈಹಿಕ ಶಿಕ್ಷಕ ನಾಗನಾಯ್ಕ ಹಾಗೂ ಇಂಗ್ಲೀಷ್ ಶಿಕ್ಷಕ ಸಿದ್ದೇಶ್ ಸೇರಿದಂತೆ ಬೃಹನ್ಮಠ ಪ್ರೌಢಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.