ಚಿತ್ರದುರ್ಗ. ಜೂ.26: ಮಕ್ಕಳು ಸೃಜನಶೀಲ ಚಟುವಟಿಕೆಗಳಲ್ಲಿ ಸಕ್ರಿಯವಾಗಬೇಕು ಎಂದು ಭರಮಸಾಗರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿ ವಿನೋದಮ್ಮ ಹೇಳಿದರು.
ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಜಿಲ್ಲಾ ಬಾಲ ಭವನ ಸಮಿತಿ, ಭರಮಸಾಗರ ಶಿಶುಅಭಿವೃದ್ಧಿ ಯೋಜನೆ ವತಿಯಿಂದ ಬಚ್ಚಬೋರನಹಟ್ಟಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗ್ರಾಮಾಂತರ ಪ್ರದೇಶದ ಮಕ್ಕಳು ಆಸಕ್ತಿಯಿಂದ ಓದಬೇಕು. ರಾಜ್ಯ ಬಾಲಭವನದ ಚಟುವಟಿಕೆಗಳು ಮಕ್ಕಳಿಗೆ ಉಪಯೋಗವಾಗುತ್ತದೆ ಎಂದರು.
ಜಿಲ್ಲಾ ಬಾಲಭವನ ಸಮಿತಿ ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್ ಮಾತನಾಡಿ, ಮಕ್ಕಳ ಭವಿಷ್ಯ ಪ್ರೌಢಶಾಲೆಯಲ್ಲಿರುತ್ತದೆ. ಪ್ರೌಢಾವಸ್ಥೆಯಲ್ಲಿ ಮಕ್ಕಳು ಏಕಾಗ್ರತೆಯಿಂದ ಓದಿ ಸ್ಪರ್ಧಾ ಜಗತ್ತಿನಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು. ಬಾಲ್ಯ ವಿವಾಹ ಮುಂತಾದ ಮೌಡ್ಯತೆಯಿಂದ ಹೊರಗಡೆ ಬರಬೇಕು ಎಂದರು. ರಾಜ್ಯಬಾಲ ಭವನದ ಅಧ್ಯಕ್ಷರ ನಿರ್ದೇಶನದಂತೆ ಮಕ್ಕಳಿಗೆ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹೋ.ಚಿ.ಬೋರಯ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಶಿಕ್ಷಕ ಓದ ಬೋರಯ್ಯ, ಅಂಗನವಾಡಿ ಕಾರ್ಯಕರ್ತೆಯಾದ ಗೌರಮ್ಮ, ರತ್ನಮ್ಮ, ಸಿರಿ ಸಂಪಿಗೆ ಸಂಸ್ಥೆಯ ಪವಿತ್ರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.






