ಬೆಂಗಳೂರು: ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದೆ. ಅದರಲ್ಲಿ ಒಂದನೇ ತರಗತಿಗೆ ಸೇರಿಸಲು ಜೂನ್ ಒಂದಕ್ಕೆ ಆರು ವರ್ಷ ತುಂಬಿರಲೇಬೇಕು ಎಂಬುದನ್ನು ಆದೇಶದಲ್ಲಿ ನಮೂದಿಸಲಾಗಿದೆ. ಇದು ಪೋಷಕರಲ್ಲಿ ಗೊಂದಲ ಮೂಡಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಆದೇಶ ಜಾರಿಗೆ ಬರಲಿದೆ.
ಒಂದನೇ ತರಗತಿಗೆ ಸೇರ್ಪಡೆಯಾಗಬೇಕಾದರೆ ವಿದ್ಯಾರ್ಥಿಗೆ ಜೂನ್ ಒಂದಕ್ಕೆ ಆರು ವರ್ಷ ತುಂಬಿರಬೇಕು. ಆರ್ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012 ಅನ್ನು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಎಲ್ಲಾ ಸೇರಿದಂತೆ ಈ ಆದೇಶದಲ್ಲಿ ಹಲವು ಗೊಂದಲಗಳಿವೆ. ಈ ಹಿಂದೆಲ್ಲಾ ಒಂದನೇ ತರಗತಿಗೆ ಸೇರಬೇಕೆಂದರೆ 5 ವರ್ಷ 10 ತಿಂಗಳು ಆಗಬೇಕಿತ್ತು. ಆದರೆ ಇದೀಗ ಜೂನ್ 1 ಕ್ಕೇ ಆರು ವರ್ಷ ಆಗಲೇಬೇಕೆಂದು ಆದೇಶದಲ್ಲಿ ತಿಳಿಸಿದೆ.
ಸದ್ಯ ಈಗಿನ ಶಿಕ್ಷಣ ನೀತಿ ಎಲ್ ಕೆಜಿ ಯಿಂದಾನೇ ಆರಂಭವಾಗಿದೆ. ಮೂರು ವರ್ಷ ಹತ್ತು ತಿಂಗಳು ತುಂಬಿದ ಮಗುವಿಗೆ ಎಲ್ ಕೆ ಜಿ ಸೇರ್ಪಡೆ ಮಾಡುತ್ತಾರೆ. ಬಳಿಕ ಯುಕೆಜಿ ಮುಗಿಸಿ ಒಂದನೇ ತರಗತಿಗೆ ಸೇರ್ಪಡೆಯಾಗುವುದರೊಳಗೆ ಐದು ವರ್ಷ ಹತ್ತು ತಿಂಗಳಾಗುತ್ತದೆ. ಆದರೆ ಹೊಸ ನೀತಿಯಿಂದ ಆರು ವರ್ಷ ತುಂಬಿರದೆ ಹೋದರೆ ಸೇರ್ಪಡೆ ಹೇಗೆ..? ಸೇರ್ಪಡೆಯಾಗದೆ ಇದ್ದರೆ, ಒಂದು ವರ್ಷ ಸುಮ್ಮನೆ ಕಳೆಯಬೇಕಾ ಎಂಬ ಹಲವು ಗೊಂದಲಗಳು ಸೃಷ್ಟಿಯಾಗಿವೆ.