ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ಹಣವನ್ನು ದೋಚುತ್ತಿದ್ದಾರೆ : ರಾಜಗೋಪಾಲ್

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : ದಲಿತರ ಉದ್ದಾರಕ್ಕಾಗಿ ಮೀಸಲಿಡಬೇಕಾಗಿರುವ ಎಸ್ಸಿಪಿ. ಟಿ.ಎಸ್ಪಿ. ಹಣವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಉಚಿತ ಗ್ಯಾರೆಂಟಿಗಳಿಗೆ ಬಳಸುತ್ತ ದಲಿತರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆಂದು ಭಾರತ್ ಏಕತಾ ಮಿಷನ್ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್ ಆಪಾದಿಸಿದರು.

 

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2023-24 ನೇ ಸಾಲಿನಲ್ಲಿ ಹನ್ನೊಂದು ಸಾವಿರದ ನೂರ 44 ಕೋಟಿ ರೂ. 2024-25 ನೇ ಸಾಲಿನಲ್ಲಿ 14282.68 ಕೋಟಿ ರೂ. ಬೇರೆ ಉದ್ದೇಶಗಳಿಗೆ ಖರ್ಚು ಮಾಡಿದ್ದು, 2025-26 ನೇ ಸಾಲಿಗೆ ಎಸ್ಸಿ.ಪಿ. ಟಿ.ಎಸ್ಪಿ. ಹಣವನ್ನು ಐದು ಉಚಿತ ಗ್ಯಾರೆಂಟಿಗಳಿಗೆ ಬಳಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅನ್ಯ ಮಾರ್ಗದಲ್ಲಿ ದಲಿತರ ಹಣ ದೋಚುತ್ತಿರುವುದನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಎಚ್ಚರಿಸಿದರು.

 

ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಒಂದು ಕೊಳವೆಬಾವಿಯನ್ನು ಕೊರೆಸಿಲ್ಲ. ಕಾರ್ ಲೋನ್ ಕೂಡ ಕೊಡುತ್ತಿಲ್ಲ. ಕಾಲಂ ಸಿ. ಮೂಲಕ ದಲಿತರ ಹಣವನ್ನು ಬಳಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಗ್ಯಾರೆಂಟಿಗಳಿಗೆ ಹಣ ಬಳಸುವುದನ್ನು ಕೂಡಲೆ ನಿಲ್ಲಸಬೇಕೆಂದು ಒತ್ತಾಯಿಸಿದರು.

 

ದಲಿತ ಸೇನೆ ರಾಮವಿಲಾಸ್ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್ ಮಾತನಾಡಿ ದಲಿತರ ಏಳಿಗೆಗಾಗಿ ಖರ್ಚು ಮಾಡಬೇಕಾಗಿರುವ ಎಸ್ಸಿಪಿ. ಟಿ.ಎಸ್ಪಿ. ಹಣವನ್ನು ರಾಜ್ಯ ಸರ್ಕಾರ ಐದು ಉಚಿತ ಗ್ಯಾರೆಂಟಿಗಳಿಗೆ ಬಳಸಿಕೊಳ್ಳುವ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸೆಕ್ಷನ್ 70 ಅಳವಡಿಸಿಕೊಂಡು ದಲಿತರ ಹಣ ದೋಚುತ್ತಿದೆ. ಮೂರು ತಿಂಗಳ ಹಿಂದೆ ಸೆಕ್ಷನ್ 70 ರದ್ದುಪಡಿಸಿರುವ ರಾಜ್ಯ ಸರ್ಕಾರ ದಲಿತರ ಹಣಕ್ಕೆ ಕೈಹಾಕಿದೆ. ದಲಿತ ಕೇರಿಗಳಿಗೆ ಹಣ ಸಮರ್ಪಕವಾಗಿ ಬಳಕೆಯಾದರೆ ನಮಗೆ ಮೀಸಲಾತಿ ಬೇಕಿಲ್ಲ. ದಲಿತರ ಪರವಾಗಿದ್ದೇವೆಂದು ಹೇಳಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಬೀತುಪಡಿಸಲಿ. ನಾಲ್ಕೈದು ಜಿಲ್ಲೆಗಳಲ್ಲಿ ನಮ್ಮ ಹೋರಾಟ ಸಮಿತಿಯಿದೆ. ಈಗಾಗಲೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಮಾಡಿದ್ದೇವೆ. ಮುಂದೆಯೂ ಹೋರಾಟ ಮಾಡುತ್ತೇವೆಂದರು.

 

ಭಾರತ್ ಏಕತಾ ಮಿಷನ್ ರಾಜ್ಯ ಉಪಾಧ್ಯಕ್ಷ ಅವಿನಾಶ್, ದಲಿತ ಸೇನೆ ತುಮಕೂರು ಜಿಲ್ಲಾಧ್ಯಕ್ಷ ಸಿದ್ದರಾಜು ಗೋಳೂರು, ಕುಮಾರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *