ಚಿತ್ರದುರ್ಗ (ಅ.20) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ. 22 ರಂದು ಒಂದು ದಿನದ ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು, ಬೆಳಿಗ್ಗೆ 10.50 ಗಂಟೆಗೆ ಹೊಸದುರ್ಗದ ತಾಲ್ಲೂಕು ಕ್ರೀಡಾಂಗಣದಲ್ಲಿನ ಹೆಲಿಪ್ಯಾಡ್‍ಗೆ ಆಗಮಿಸುವರು.
ಬೆಳಿಗ್ಗೆ 11 ಗಂಟೆಗೆ ಇಲ್ಲಿನ ತರೀಕೆರೆ ರಸ್ತೆಯಲ್ಲಿನ ಕೋರ್ಟ್ ಮುಂಭಾಗದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘ ಹೊಸದುರ್ಗ ಇವರ ವತಿಯಿಂದ ಆಯೋಜಿಸಿರುವ ಹೊಸದುರ್ಗ ನ್ಯಾಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ 12 ಗಂಟೆಗೆ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಶಿಕ್ಷಕರ ಸಮುದಾಯ ಭವನ ನಿರ್ಮಾಣ, ಮಂಗಸಂದ್ರ ಗೊಲ್ಲರಹಟ್ಟಿ ಸಮುದಾಯ ಭವನ ನಿರ್ಮಾಣ, ಅಂಚಿಬಾರಿಹಟ್ಟಿ ಗ್ರಾಮದಲ್ಲಿ ಸಮುದಾಯ ಭವನ, ನಾಗಯ್ಯನಹಟ್ಟಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು, 100 ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡುವರು, 94 ಸಿಸಿ, 94 ಸಿ ಹಾಗೂ ಬಗರ್‍ಹುಕುಂ ಸಾಗುವಳಿ ಚೀಟಿ ವಿತರಣೆ ಮಾಡುವರು, ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡುವರು.
ಮಧ್ಯಾಹ್ನ 01.20 ಗಂಟೆಗೆ ದೇವಾಪುರ ಗ್ರಾಮದ ಬಳಿ ಶ್ರೀಕ್ಷೇತ್ರ ಹಾಲುರಾಮೇಶ್ವರ ಕ್ಷೇತ್ರದಲ್ಲಿ ಮೂಲ ಉದ್ಭವ ಗಂಗಾಮಾತೆಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀ ಪಂಚಲಿಂಗೇಶ್ವರ ಹಾಗೂ ಇತರೆ ದೇವಾಲಯಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವರು.
ಮುಖ್ಯಮಂತ್ರಿಗಳು ಅದೇ ದಿನ ಮಧ್ಯಾಹ್ನ 2.30 ಗಂಟೆಗೆ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‍ಗೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.