ಅನ್ನ, ಆರೋಗ್ಯದಲ್ಲಿ ಮೋಸ : ಆರ್.ಅಶೋಕ್ ವಾಗ್ದಾಳಿ

suddionenews
2 Min Read

ನವೆಂಬರ್‌ 21, ಬೆಂಗಳೂರು: ಸದನ ಆರಂಭವಾಗುವ ಮುನ್ನವೇ ರಾಜ್ಯ ಸರ್ಕಾರ ಜನರಿಗೆ ರೇಷನ್‌ ಕಾರ್ಡ್‌ ವಾಪಸ್‌ ನೀಡಬೇಕು. ಇಲ್ಲವಾದರೆ ತೀವ್ರವಾದ ಹೋರಾಟ ಮಾಡಿ ಸರ್ಕಾರಿ ಕಚೇರಿಗಳಿಗೆ ಹಾಗೂ ವಿಧಾನಸೌಧಕ್ಕೆ ಬೀಗ ಹಾಕುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದರು.

ಜಯನಗರದ ಅರಸು ಕಾಲೋನಿಯಲ್ಲಿ ರೇಷನ್‌ ಕಾರ್ಡ್‌ ರದ್ದುಗೊಂಡ ಕುಟುಂಬದವರನ್ನು ಅವರು ಭೇಟಿ ಮಾಡಿ, ನಂತರ ಮಾತನಾಡಿದ ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಎಂದು ಹೇಳಿ ಕನ್ನಭಾಗ್ಯ ಕೊಟ್ಟಿದ್ದಾರೆ. ಅನ್ನವನ್ನು ಕದ್ದು ಲಕ್ಷಾಂತರ ಜನರಿಗೆ ಅನ್ಯಾಯ ಮಾಡಿದ್ದಾರೆ. ಅರಸು ಕಾಲೋನಿಯಲ್ಲಿ 45 ವರ್ಷದಿಂದ ರೇಷನ್‌ ಕಾರ್ಡ್‌ ಹೊಂದಿದ್ದ ವೃದ್ಧೆ, ಈಗ ಅರ್ಹತೆ ಕಳೆದುಕೊಂಡಿದ್ದಾರೆ. ಅಂಕಿ ಅಂಶದ ಪ್ರಕಾರ, 250 ಸರ್ಕಾರಿ ನೌಕರರ ಬಳಿ ರೇಷನ್‌ ಕಾರ್ಡ್‌ ಇದ್ದರೂ, 12 ಲಕ್ಷ ಜನರ ಕಾರ್ಡ್‌ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಏನೂ ಭಯ ಬೇಡವೆಂದು ಸಿಎಂ ಸಿದ್ದರಾಮಯ್ಯ ಹೇಳಿದರೆ, ಆಹಾರ ಸಚಿವರು ಮತ್ತೆ ಅರ್ಜಿ ಹಾಕಿ ಎಂದು ಹೇಳುತ್ತಾರೆ. ಕಾಂಗ್ರೆಸ್‌ ನಾಯಕರು ತಪ್ಪು ಮಾಡಿದ ಮೇಲೆ ಜನರು ಯಾಕೆ ಮರಳಿ ಅರ್ಜಿ ಹಾಕಬೇಕು? ಎಂದು ಪ್ರಶ್ನೆ ಮಾಡಿದರು.

ಮರಳಿ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಒಂದು ಕಾರ್ಡ್‌ಗೆ 10-15 ಸಾವಿರ ರೂ. ಲಂಚ ನೀಡಬೇಕಾಗುತ್ತದೆ. ಯಾರೂ ಅರ್ಜಿ ಹಾಕಬಾರದು, ಸರ್ಕಾರವೇ ಮರಳಿ ರೇಷನ್‌ ಕಾರ್ಡ್‌ ಕೊಡಬೇಕು. ದೇವಸ್ಥಾನದ ಮುಂದೆ ಹೂ ಮಾರುವವರು, ಸೊಪ್ಪು ಮಾರುವವರ ರೇಷನ್‌ ಕಾರ್ಡ್‌ ರದ್ದುಪಡಿಸಲಾಗಿದೆ. ಇದರ ವಿರುದ್ಧ ಸದನದಲ್ಲಿ ಹಾಗೂ ಹೊರಗೆ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಏಕಾಏಕಿ ರೇಷನ್‌ ಕಾರ್ಡ್‌ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚಲು ಕೂಡ ಹಣವಿಲ್ಲ. 20-30 ಸಾವಿರ ಕೋಟಿ ರೂ. ಉಳಿಸಿ, ಶಾಸಕರ ಬಂಡಾಯ ಶಮನಕ್ಕೆ ಬಳಸಲಾಗುತ್ತದೆ ಎಂದು ದೂರಿದರು. ಸಚಿವರ ಮನೆ ಆಧುನೀಕರಣಕ್ಕೆ 40-50 ಕೋಟಿ ರೂ., ಸಿಎಂ ಮನೆ ನವೀಕರಣಕ್ಕೆ 2 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಬಡ ಜನರಿಗೆ ಅಕ್ಕಿ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *