ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿ ಬಂದಾಗಿನಿಂದ ಕಾಂಗ್ರೆಸ್ ಹೌಹಾರಿದೆ. ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದೆ, ಪೇಸಿಎಂ ಅಭಿಯಾನವನ್ನು ಶುರು ಮಾಡಿತ್ತು. ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಪೇಸಿಎಂ ಬಳಿಕ ತಣ್ಣಗಾಗಿತ್ತು. ಇದೀಗ ಕಾಂಗ್ರೆಸ್ ಸಿನಿಮಾದ ರೀತಿಯಲ್ಲಿ ಹೊಸ ಅಭಿಯಾನವೊಂದನ್ನು ಶುರು ಮಾಡಿಕೊಂಡಿದೆ.
ಸಿನಿಮಾಗಳ ಹೆಸರನ್ನು ಬಳಸಿಕೊಂಡು ಪೋಸ್ಟರ್ ಗಳನ್ನು ರೆಡಿ ಮಾಡಿ ಅಭಿಯಾನ ಆರಂಭಿಸಿದ್ದಾರೆ. ಸಿಎಂ ಸೇರಿದಂತೆ ಸಚಿವರುಗಳ ಫೋಟೋಗಳನ್ನು ಬಳಸಿಕೊಂಡು ಸಿನಿಮಾದ ಹೆಸರಿಟ್ಟು, ಪೋಸ್ಟರ್ ರೆಡಿ ಮಾಡಿದ್ದಾರೆ. ಈ ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಎಂ ಬೊಮ್ಮಾಯಿ ಹಾಗೂ ಅಶ್ವತ್ಥ್ ನಾರಾಯಣ್ ಕಾಂಬಿನೇಷನ್ ನಲ್ಲಿ ಕಿಲಾಡಿ ಜೋಡಿ ಬರುತ್ತಿದೆ, ಸಿಎಂ ಬೊಮ್ಮಾಯಿ ಒಬ್ಬರೆ ಇರುವಂತ ಪ್ರಚಂಡ ಕುಳ್ಳ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪೋಸ್ಟರ್ ನಲ್ಲಿ ಹಾರ ಹಿಡಿದುಕೊಂಡು ನಿಂತಿರುವಂತೆ ಎಡಿಟ್ ಮಾಡಿದ್ದು, ಆ ಸಿನಿಮಾಗೆ ಚಪಲ ಚನ್ನಿಗರಾಯ ಎಂದು ಹೆಸರಿಡಲಾಗಿದೆ.
ಇನ್ನು ಈ ಪೋಸ್ಟರ್ ಗಳಲ್ಲಿ 40% ಸರ್ಕಾರ ಬಿಜೆಪಿ ಅಂದ್ರೆ ಭ್ರಷ್ಟಚಾರ ಎಂಬುದನ್ನು ಕರ್ನಾಟಕ ಮ್ಯಾಪ್ ನಲ್ಲಿ ಹಾಕಿದ್ದಾರೆ. ಈ ಎಲ್ಲಾ ಸಿನಿಮಾಗಳಿಗೆ ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಬದಲಾಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೀಗೆ ಭಿನ್ನವಾಗಿ ಮತ್ತೆ ಅಭಿಯಾನ ಶುರು ಮಾಡಿದ್ದಾರೆ.