ಹುಬ್ಬಳ್ಳಿ: ಚನ್ನಪಟ್ಟಣ ಉಪಚುನಾವಣಾ ಕ್ಷೇತ್ರ ಪ್ರತಿಷ್ಠೆಯ ಕಣವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಕಾಂಗ್ರೆಸ್ ನಿಂದ ಡಿಕೆ ಶಿವಕುಮಾರ್ ಫ್ಯಾಮಿಲಿಯಲ್ಲೇ ಸ್ಪರ್ಧೆ ಮಾಡ್ತಾರೆ ಎಂಬುದು ಒಂದು ಹಂತಕ್ಕೆ ಕನ್ಫರ್ಮ್ ಆಗಿತ್ತು. ಆದರೆ ಈಗ ಇರೋದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಯಾರೆಂಬ ಬಗ್ಗೆ ಪ್ರಶ್ನೆ. ಚನ್ನಪಟ್ಟಣ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿದ್ದ ಕಾರಣ, ಅಭ್ಯರ್ಥಿ ಆಯ್ಕೆಯ ಅಧಿಕಾರವನ್ನು ಕುಮಾರಸ್ವಾಮಿ ಅವರಿಗೆ ನೀಡಲಾಗಿತ್ತು. ಕುಮಾರಸ್ವಾಮಿ ಅವರು ಯೋಚನೆ ಮಾಡಿ ಸಿಪಿ ಯೋಗೀಶ್ವರ್ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದರು. ಚಿಹ್ನೆ ಮಾತ್ರ ಜೆಡಿಎಸ್ ಆಗಿರಬೇಕೆಂಬ ಷರತ್ತಿನ ಮೇರೆಗೆ ರಾಜೀನಾಮೆ ನೀಡಿ ಸಿಪಿ ಯೋಗೀಶ್ವರ್ ದೊಡ್ಡ ಶಾಕ್ ನೀಡಿದ್ದಾರೆ.
ಬಿಜೆಪಿಯಿಂದ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿದ್ದ, ಇದೀಗ ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಗೆ ತೆರಳಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ರಾಜೀನಾಮೆಯ ಪತ್ರ ನೀಡಿದ್ದಾರೆ. ಈ ಬೆಳವಣಿಗೆ ಬಿಜೆಪಿ ನಾಯಕರಿಗೂ ಶಾಕಿಂಗ್ ಎನಿಸಿದೆ. ಚನ್ನಪಟ್ಟಣವನ್ನು ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಿಟ್ಟುಕೊಟ್ಟು ತಪ್ಪೇನಾದರೂ ಮಾಡೀತಾ ಎಂಬ ಪ್ರಶ್ನೆ ಹಲವರನ್ನು ಕಾಡಿದೆ.
ಇದರ ನಡುವೆ ಕಾಂಗ್ರೆಸ್ ಬೇರೆ ಇನ್ನು ಟಿಕೆಟ್ ಘೋಷಣೆ ಮಾಡಿಲ್ಲ. ಸಿಪಿ ಯೋಗೀಶ್ವರ್ ಮತ್ತು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇಲ್ಲಿ ಗೆಲುವು ಬಹಳ ಮುಖ್ಯವಾಗಿರುವ ಕಾರಣ, ಸಿಪಿ ಯೋಗೀಶ್ವರ್ ಕಾಂಗ್ರೆಸ್ ಪಕ್ಷವನ್ನೇನಾದರೂ ಸೇರುತ್ತಾರಾ..? ಕಾಂಗ್ರೆಸ್ ಪಕ್ಷ ಸಿಪಿ ಯೋಗೀಶ್ವರ್ ಅವರಿಗೇನೆ ಟಿಕೆಟ್ ನೀಡುತ್ತಾ ಎಂಬೆಲ್ಲಾ ಪ್ರಶ್ನೆಗಳು ಸದ್ಯ ಜನರನ್ನ ಕಾಡುತ್ತಿದೆ.