ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 28: ಬುದ್ದ, ಬಸವ, ಅಂಬೇಡ್ಕರ್‌ರವರ ಜ್ಞಾನ ಪ್ರತಿಯೊಬ್ಬರ ಅಂತರಾತ್ಮದಲ್ಲಿದ್ದಾಗ ಮಾತ್ರ ಬಡತನ, ಅಸ್ಪೃಶ್ಯತೆ, ಮೌಢ್ಯತೆಯಿಂದ ಹೊರಬರಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ದಲಿತರಿಗೆ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬಿಎನ್‌ಎಸ್. ಬಿಎನ್‌ಎಸ್‌ಎಸ್ ಬಿಎನ್‌ಎಸ್‌ಎ ಮತ್ತು ಪಿಓಎ. ಕಾಯ್ದೆಗಳ ಕುರಿತು ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಗಾಟಿಸಿ ನಂತರ ಅಂಬೇಡ್ಕರ್, ಬಿ.ಕೃಷ್ಣಪ್ಪನವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಎಷ್ಟು ಹೋರಾಟ ನಡೆದಿದೆಯೋ ಸ್ವಾತಂತ್ರಾ ನಂತರವೂ ಅಷ್ಟೇ ಹೋರಾಟ ನಡೆದಿದೆ. ಡಾ.ಬಿ.ಆರ್.ಅಂಬೇಡ್ಕರ್‌ರವರು ಪ್ರಪಂಚ ಪರ್ಯಟನೆ ನಡೆಸಿ ವೈಶಿಷ್ಟಪೂರ್ಣ, ಅರ್ಥಪೂರ್ಣವಾದ ಸಂವಿಧಾನ ನೀಡಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕು ಎನ್ನುವುದು ಇದರ ಉದ್ದೇಶ. ಹುಟ್ಟು ಯಾರ ಕೈಯಲ್ಲೂ ಇಲ್ಲ. ಆದರೆ ಬದುಕು ನಮ್ಮ ಕೈಯಲ್ಲಿದೆ. ಕಷ್ಟವಿರುವ ಕಡೆ ಸಾಧನೆ ಮಾಡಲು ಛಲವಿರುತ್ತದೆ. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಬದುಕಿನಲ್ಲಿ ಬದಲಾವಣೆ ಕಂಡುಕೊಳ್ಳಬಹುದು ಎಂದು ಹೇಳಿದರು.
ಸರ್ಕಾರದ ಸೌಲತ್ತು, ಆಶಯಗಳನ್ನು ಬಳಸಿಕೊಂಡು ದಲಿತರು ಶಿಕ್ಷಣವಂತರಾಗಬೇಕು. ಸರ್ಕಾರಿ ನೌಕರಿಗೆ ಕಾಯುತ್ತ ಕುಳಿತುಕೊಳ್ಳಬಾರದು. ನಾನಾ ರೀತಿ ವಲಯಗಳಿವೆ. ಇಂದಿರಾಗಾಂಧಿ ಡಿ.ದೇವರಾಜ ಅರಸು ಇವರುಗಳು ಉಳುವವನೆ ಭೂಮಿಯ ಒಡೆಯ ಎನ್ನುವ ಕಾನೂನು ಜಾರಿಗೆ ತಂದು ಭೂಮಿ ಇಲ್ಲದವನು ಭೂ ಮಾಲೀಕನಾಗುವಂತ ಅವಕಾಶ ಒದಗಿಸಿದ್ದಾರೆ. ಹಾಗಾಗಿ ಭೂಮಿಯನ್ನು ಯಾರು ಮಾರಿಕೊಳ್ಳಬೇಡಿ. ಕೃಷಿಗಾಗಿ ನಾನಾ ರೀತಿ ಸ್ಕೀಂಗಳು ಸರ್ಕಾರದಲ್ಲಿದೆ. ಎಲ್ಲವನ್ನು ಬಳಸಿಕೊಂಡು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಸಂಸ್ಕಾರ ಕೊಡಿ. ಕಾನೂನು ತಿದ್ದುಪಡಿಗಳನ್ನು ವಕೀಲರುಗಳು ತಿಳಿದುಕೊಳ್ಳಬೇಕು. ಎಲ್ಲರ ಮೇಲೂ ಸಾಮಾಜಿಕ ಜವಾಬ್ದಾರಿಯಿದೆ. ದಲಿತ ವಕೀಲರುಗಳು ಕಾನೂನು ಜ್ಞಾನದ ಮೂಲಕ ಮ ಸಮಾಜದ ರಕ್ಷಣೆಗೆ ಮುಂದಾಗಿ ಎಂದರು.
ಮೀಸಲಾತಿ ಬೇಕು. ಸಂವಿಧಾನ ರಕ್ಷಣೆ ಜೊತೆಗೆ ಶಿಕ್ಷಣ ಬಹಳ ಮುಖ್ಯ. ಆಗ ಮಾತ್ರ ಮೌಢ್ಯದಿಂದ ಹೊರ ಬಂದು ನೆಮ್ಮದಿಯ ಜೀವನ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಹೈಕೋರ್ಟ್ ನ್ಯಾಯವಾದಿ ಹಾಗೂ ಸಾಮಾಜಿಕ ಚಿಂತಕ ಬಾಲನ್ ಮಾತನಾಡಿ ಬ್ರಾಹ್ಮಣರ ಕೈಯಲ್ಲಿ ಅಧಿಕಾರವಿದೆಯೇ ವಿನಃ ದಲಿತರು, ಹಿಂದುಳಿದವರು, ಆದಿವಾಸಿಗಳ ಕೈಗೆ ಅಧಿಕಾರ ಸಿಗುವುದಿಲ್ಲ. ನ್ಯಾಯಾಧೀಶರ ಅಧಿಕಾರ ಕಿತ್ತು ಪೊಲೀಸರ ಕೈಗೆ ಅಧಿಕಾರ ನೀಡಿರುವುದೆ ಹೊಸ ವಿಶೇಷ ಕಾಯಿದೆ. ಇದು ದೇಶ ವಿರೋಧಿ, ದಲಿತ ವಿರೋಧಿ, ಮಾನವ ವಿರೋಧಿ. ರಾಜರ ಕಾಲದಲ್ಲಿಯೂ ಜಾತಿವಾದ, ಕೋಮುವಾದವಿತ್ತು. ಬ್ರಿಟೀಷರು ನಮ್ಮ ದೇಶಕ್ಕೆ ಬಂದಿದ್ದು, ಆಳುವುದಕ್ಕಲ್ಲ. ನಮ್ಮಲ್ಲಿನ ಸಂಪತ್ತನ್ನು ಲೂಟಿ ಹೊಡೆಯಲು ಎಂದರು.
ಅರಣ್ಯ ಕಾಯಿದೆ, ಖನಿಜ ಕಾಯಿದೆ ಜಾರಿಗೆ ತಂದಿರುವುದು ದೋಚಿಕೊಂಡು ಹೋಗುವುದಕ್ಕಾಗಿ, ಕಾನೂನು ಮುಂದೆ ಎಲ್ಲರೂ ಸಮಾನರು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಅನ್ಯಾಯ, ಅಕ್ರಮವನ್ನು ಪ್ರಶ್ನಿಸಿದರೆ ನೇರವಾಗಿ ಒಳಗೆ ತಳ್ಳುವ ದಬ್ಬಾಳಿಕೆ ಇನ್ನು ನಡೆಯುತ್ತಿದೆ. ಐದು ಸಾವಿರ ಕೋಟಿ ರೂ.ಖರ್ಚು ಮಾಡಿ ಮಗನ ಮದುವೆ ಮಾಡಿದ ಉದ್ಯಮಿ ವಿರುದ್ದ ಮಾತನಾಡಲು ಸರ್ಕಾರಕ್ಕೂ ಶಕ್ತಿಯಿಲ್ಲದಂತಾಗಿದೆ ಎಂದು ಟೀಕಿಸಿದರು.
೧೯೫೫ ರಲ್ಲಿ ಕಾನೂನು ಆಯೋಗ ರಚನೆಯಾಯಿತು. ಹೊಸ ಕಾನೂನು ಅಸಾಂವಿಧಾನಿಕವಾಗಿದೆ. ಹೊಸ ವಿಷದ ಬಾಟಲಿಯಲ್ಲಿ ಹಳೆ ಮದ್ಯವನ್ನು ತುಂಬಿದಂತಿದೆ. ನ್ಯಾಯಾಂಗ ಶೇ.೭೦ ರಷ್ಟು ದಲಿತರಿಗೆ ಅನ್ಯಾಯ ಮಾಡಿದೆ. ಹೊಸ ಕಾಯಿದೆಗಳು ಹಲ್ಲು ಕಿತ್ತ ಹಾವಿನಂತಿದೆ. ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿ ಈಗ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಎಲ್ಲವನ್ನು ಖಾಸಗಿಕರಣಗೊಳಿಸಿದ್ದಾರೆ. ದಲಿತರು ಸಂಘಟಿತರಾಗಿ ಹೋರಾಟಕ್ಕೆ ಇಳಿಯದಿದ್ದರೆ ನ್ಯಾಯ ಸಿಗುವುದು ಕಷ್ಟ ಎಂದು ಜಾಗೃತಿಗೊಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮೀಸಲಾತಿ) ರಾಜ್ಯಾಧ್ಯಕ್ಷ ವೈ.ರಾಜಣ್ಣ ತುರುವನೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಟಿ.ಪ್ರಾಸ್ತಾವಿಕವಾಗಿ ಮಾತನಾಡಿದರು.
ವಕೀಲರುಗಳಾದ ಎಂ.ಕೆ.ಲೋಕೇಶ್,ಎನ್.ಚಂದ್ರಪ್ಪ, ಮಾಲತೇಶ್ ಅರಸ್, ಗೌರವಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ರಾಜ್ಯ ಉಪಾಧ್ಯಕ್ಷ ಹೆಚ್.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಜಗದೀಶ್ ಪಿ.ಕವಾಡಿಗರಹಟ್ಟಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಹನುಮಂತಪ್ಪ ಪೂಜಾರಿ ದಲಿತ ಕ್ರಾಂತಿಗೀತೆ ಮೂಲಕ ಪ್ರಾರ್ಥಿಸಿದರು.ಹೆಚ್.ಈಶ್ವರಪ್ಪ ಸ್ವಾಗತಿಸಿದರು. ಶಿವಣ್ಣ ವಂದಿಸಿದರು. ನ್ಯಾಯವಾದಿ ಎಂ.ರಮೇಶ್ ನಿರೂಪಿಸಿದರು.