ಕೋಡಿ ಮಠದ ಶ್ರೀಗಳ ಭವಿಷ್ಯಕ್ಕೆ ಭಾರೀ ಬೇಡಿಕೆ ಇದೆ. ಅವರು ಭವಿಷ್ಯ ನುಡಿತಾರೆ ಅಂದ್ರೆ ಎಲ್ಲರ ಕುತೂಹಲ ಆ ಕಡೆ ಇರುತ್ತೆ. ಮೊದಲೇ ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕದನ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗ ಅದೇ ಕುರ್ಚಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿಯ ನಂತರ ಸಿಎಂ ಕುರ್ಚಿ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ ಶ್ರೀಗಳು.
ಕಾಂಗ್ರೆಸ್ ಸರ್ಕಾರದಲ್ಲಿ ಸೆಪ್ಟೆಂಬರ್ ಕ್ರಾಂತಿ ಠುಸ್ ಆಯ್ತು, ನವೆಂಬರ್ ಕ್ರಾಂತಿ ವರ್ಕ್ ಆಗ್ಲಿಲ್ಲ. ಈಗ ಸಂ’ಕ್ರಾಂತಿ’ ವರ್ಕ್ ಆಗುವ ಬಗ್ಗೆ ಕೋಡಿಶ್ರೀಗಳು ಸೂಚನೆ ನೀಡಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದೊಅವಣೆಗಳಾಗಲಿದ್ದು, ಮುಖ್ಯಮಂತ್ರಿ ಬದಲಾವಣೆ ನಡೆಯುವುದು ಖಚಿತವಾಗಿದೆ. ಶಿವನ ಮುಡಿಯ ಮೇಲಿರುವ ಮಲ್ಲಿಗೆಯ ಶಿವನ ಪಾದಕ್ಕೆ ಬೀಳಲೇಬೇಕು. ರಾಜ್ಯ ರಾಜಕಾರಣದ ಗೊಂದಲವು ಸಂಪೂರ್ಣವಾಗಿ ಬಗೆಹರಿಯಲಿದ್ದು, ಸುಖಾಂತ್ಯವಾಗಲಿದೆ. ಮಕರ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದ ನಾಯಕತ್ವದ ಗುದ್ದಾಟವು ಬಗೆಹರಿಯಲಿದೆ.
ನಾನು ಶಾಸ್ತ್ರ ಹೇಳುವವನಲ್ಲ ಶಾಸ್ತ್ರಕಾರನಲ್ಲ ಮುಂದೆ ನಡೆಯುವ ವಿಚಾರಗಳನ್ನು ತಿಳಿಸುವ ಶಕ್ತಿ ಹೊಂದಿದ್ದೇನೆ. ಅದೇ ರೀತಿ ರಾಷ್ಟ್ರ ರಾಜಕಾರಣದಲ್ಲಿಯೂ ಕೂಡ ಯುಗಾದಿ ನಂತರ ಸಮಸ್ಯೆಗಳು ಎದುರಾಗಲಿವೆ. ಇತ್ತೀಚೆಗೆ ನಡೆದ ಬಾಂಬ್ ಬ್ಲಾಸ್ಟ್ ನಂತಹ ಅಹಿತಕರ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ನಡೆಯಲಿವೆ. ರಾಜಕಾರಣಿಗಳು ರಾಜಕಾರಣವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವಾಗ ಮಠಾಧೀಶರು ಸಮಾಜದ ಒಳಿತಿಗಾಗಿ ರಾಜಕೀಯವಾಗಿ ಏಕೆ ಸಲಹೆ ಸೂಚನೆಗಳನ್ನು ನೀಡಬಾರದು. ಮಠಗಳು ಮೊದಲು ಜಾತಿಯತೆಯಿಂದ ದೂರವಿರಬೇಕು. ರಾಜಕಾರಣ ದಿಕ್ಕುತಪ್ಪಿದೆ. ತತ್ವ ಆದರ್ಶ ಹಾಗೂ ಮೌಲ್ಯಗಳು ಮಾಯವಾಗಿವೆ. ಹಣವಿದ್ದವರು ರಿಯಲ್ ಎಸ್ಟೇಟ್ ಕುಳಗಳು ರಾಜಕಾರಣದಲ್ಲಿ ವಿಜೃಂಭಿಸುತ್ತಿದ್ದಾರೆ ಎಂದಿದ್ದಾರೆ.
