ಬೆಂಗಳೂರು: ಚುಮು ಚುಮು ಚಳಿಯಲ್ಲಿ ನಡುಗುತ್ತಿದ್ದ ಜನತೆಗೆ ವರುಣರಾಯ ದರ್ಶನ ಕೊಟ್ಟಿದ್ದಾನೆ. ರಾಜ್ಯಾದ್ಯಂತ ಅಲ್ಲಲ್ಲಿ ಕೊಂಚ ಮಳೆಯಾಗಿದೆ. ತುಂತುರು ಮಳೆ ಶುರುವಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಎಲ್ಲೆಡೆ ತುಂತುರು ಮಳೆ ಸುರಿದಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಶ್ರೀಲಂಕಾದ ದಕ್ಷಿಣ ಭಾಗದಿಂದ ತುಳುನಾಡಿನ ಉತ್ತರ ಕರಾವಳಿ ಕಡೆಗೆ ಸೈಕ್ಲೋನ್ ಎದ್ದಿದೆ. ಹೀಗಾಗಿ ಮುಂದಿನ 24ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಮೋಡಕವಿದ ವಾತಾವರಣ ಹಾಗೂ ಸಾಧಾರಣ ಮಳೆಯಾಗಲಿದೆ ಎನ್ನಲಾಗಿದೆ.
ತಮಿಳುನಾಡಿನಾದ್ಯಂತ ಭಾರೀ ಮಳೆಯಾಗಲಿದೆ. ಚಳಿಯ ಜೊತೆ ಜೊತೆಗೆ ಮಳೆಯೂ ಕಾಣಿಸಿಕೊಳ್ಳುತ್ತಿದ್ದು, ಜನ ಹೊರಗೆ ಬರುವುದಕ್ಕೇನೆ ಸೋಮಾರಿತನವನ್ನಾಗಿಸುತ್ತಿದೆ. ಇನ್ನು ಕೆಲ ದಿನಗಳ ಕಾಲ ತುಂತುರು ಮಳೆ ಮುಂದುವರೆಯಲಿದೆ.