ಚಳ್ಳಕೆರೆ |  ನಿಧಿಗಾಗಿ ನಾಗಪ್ಪನ ದೇಗುಲವನ್ನೆ ಅಗೆದ ಕಳ್ಳರು..!

1 Min Read

 

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 13  : ಕಳ್ಳರಿಗೆ ದೇವರಾದರೇನು.. ದೇವಸ್ಥಾನವಾದರೇನು. ಭಯವನ್ನೇ ಪಡದೆ ಕಳ್ಳತನ ಮಾಡಿಬಿಡುತ್ತಾರೆ. ಅದರಲ್ಲೂ  ಆ ಜಾಗದಲ್ಲಿ ನಿಧಿ ಇದೆ ಎಂಬುದು ಗೊತ್ತಾದರೆ ದೇವಸ್ಥಾನವನ್ನೇ ಕೆಡವಿ ಬಿಡುತ್ತಾರೆ. ಸಾಕಷ್ಟು ದೇವಸ್ಥಾನಗಳಲ್ಲಿ ನಿಧಿ ಆಸೆಗೆ ಹೋದವರೆಲ್ಲಾ ಮಣ್ಣು ಮುಕ್ಕಿದ್ದಾರೆ. ನಿಧಿ ಸಿಗದೆ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾರೆ. ಇದೀಗ ಚಳ್ಳಕೆರೆಯಲ್ಲೂ ಅಂತದ್ದೊಂದು ಘಟನೆ ನಡೆದಿದೆ.

ಚಳ್ಳಕೆರೆ ತಾಲೂಕಿನ ಚನ್ನಮ್ಮ ನಾಗತಿಹಳ್ಳಿ ಎಂಬ ಗ್ರಾಮವಿದೆ. ಅಲ್ಲಿ ಕರಿಯಣ್ಣನ ಮರಡಿಯಲ್ಲಿ ನಾಗಪ್ಪನ ದೇವಸ್ಥಾನವಿದೆ. ಈ ದೇವಾಲಯದಲ್ಲಿ ಯಾವಾಗಲೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇದು ಕಾಡುಗೊಲ್ಲರ ಸಮುದಾಯದವರ ದೇವರು. ಈ ಸಮುದಾಯದವರು ಭಕ್ತಿಯಿಂದ ಪೂಜೆ ಮಾಡುವ ನಾಗ ದೇಗುಲ. ಆದರೆ ಇಲ್ಲಿ ನಿಧಿ ಇದೆ ಎಂದು ಹೇಳಿದ ಮಾತುಗಳನ್ನೇ ನಂಬಿಕೊಂಡು ಕಳ್ಳರು, ದೇಗುಲವನ್ನೇ ವಿರೂಪಗೊಳಿಸಿದ್ದಾರೆ. ದೇವಸ್ಥಾನದಲ್ಲೆಲ್ಲಾ ಅಗೆದು ಹಾಕಿದ್ದಾರೆ. ಹೀಗೆ ದೇವಾಲಯವನ್ನು ವಿರೂಪಗೊಳಿಸಿರುವುದಕ್ಕೆ ಗೊಲ್ಲ ಸಮುದಾಯದವರು ಆತಂಕಗೊಂಡಿದ್ದಾರೆ.

ಇತ್ತಿಚೆಗಷ್ಟೇ ಈ ದೇಗುಲದಲ್ಲಿ ಅದ್ದೂರಿಯಾಗಿ ನಾಗಪಂಚಮಿ ಹಬ್ಬವನ್ನು ಆಚರಣೆ‌ ಮಾಡಲಾಗಿತ್ತು. ನಾಗರ ಪಂಚಮಿ ಬಂದಾಗ ಈ ದೇಗುಲದಲ್ಲಿ ಹಬ್ಬ ಆಚರಣೆ ಮಾಡುತ್ತಾರೆ. ಕರಿಯಣ್ಣನ ಮರಡಿಯಲ್ಲಿ ಈ ದೇಗುಲ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಆದರೆ ನಿಧಿ ಆಸೆಗೆ ಬಿದ್ದ ಕಳ್ಳರು ದೇಗುಲವನ್ನೇ ವಿರೂಪಗೊಳಿಸಿದ್ದಾರೆ. ನಮ್ಮ ಹಿರಿಯರು ಹೇಳುವಂತೆ ನಿಧಿಯನ್ನು ನಾಗಗಳು ಸದಾ ಕಾಯುತ್ತಾ ಇರುತ್ತವೆ ಎಂದೇ ಹೇಳುತ್ತಾರೆ. ಈ ಕಳ್ಳರು ನೋಡಿದರೆ ನಾಗ ದೇಗುಲಕ್ಕೆ ಕನ್ನ ಹಾಕಿದ್ದಾರೆ. ದೇವರು ಎಂದರೆ, ನಾಗಗಳು ಎಂದರೆ ಈ ಕಳ್ಳರಿಗೆ ಭಯವೇ ಇಲ್ಲ ಎನ್ನಿಸುತ್ತಿದೆ. ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *