ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 08 : ಚಳ್ಳಕೆರೆ ತಾಲ್ಲೂಕು ಕೆಡಿ. ಕೋಟೆಯಲ್ಲಿ ಹಲ್ಲೆಗೊಳಗಾಗಿರುವ ದಲಿತರು ತಮಗೆ ನ್ಯಾಯ ಕೊಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಬುಧವಾರ ರಾತ್ರಿ ದಿಢೀರ್ ಧರಣಿ ನಡೆಸಿದರು.
ಹಿಂದಿನಿಂದಲೂ ನಿಮ್ಮಗಳ ಚಾಕ್ರಿ ಮಾಡಿಕೊಂಡು ಬರುತ್ತಿರುವ ನಮಗೆ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಶುಭ ಕಾರ್ಯಗಳನ್ನು ನಡೆಸಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಕ್ಕೆ ರೆಡ್ಡಿ, ನಾಯಕ ಹಾಗೂ ಗೊಲ್ಲ ಜನಾಂಗದವರು ನಮ್ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿಂತೆ ಪರಶುರಾಂ ಠಾಣೆ ಪಿಎಸ್‍ಐ. ನಮ್ಮ ಹೇಳಿಕೆಗಳನ್ನು ತಿರುಚಿ ಬೇರೆ ರೀತಿಯಲ್ಲಿ ಎಫ್.ಐ.ಆರ್. ಮಾಡಿರುವುದರಿಂದ ಕೂಡಲೆ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಧರಣಿ ನಿರತರು ಜಿಲ್ಲಾ ರಕ್ಷಣಾಧಿಕಾರಿಯನ್ನು ಒತ್ತಾಯಿಸಿದರು.

ಕೆಡಿ.ಕೋಟೆಯಲ್ಲಿರುವ ದೇವಸ್ಥಾನದಲ್ಲಿ ಬರುವ ಆದಾಯದಲ್ಲಿ ಚೀಟಿ ಎತ್ತಿಕೊಳ್ಳಲು ಬೇರೆಯವರಿಗೆ ಕೊಟ್ಟಂತೆ ನಮಗೂ ಅವಕಾಶ ಕೊಡಿ ಎಂದು ಕೇಳಿದ್ದನ್ನೆ ದೊಡ್ಡ ಪ್ರಮಾದವನ್ನಾಗಿ ಮಾಡಿರುವ ಅನ್ಯ ಜಾತಿಯವರು ನಮ್ಮಗಳ ಸೇವೆ ಮಾಡಿಕೊಂಡು ಹೇಳಿದಂತೆ ಕೇಳಿಕೊಂಡು ಸುಮ್ಮನಿರಬೇಕೆಂದು ಮೊದಲಿನಿಂದಲೂ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಗ್ರಾಮದಲ್ಲಿ ನಮಗೆ ಯಾವುದೇ ರೀತಿಯ ಸ್ವಾತಂತ್ರ್ಯವಿಲ್ಲ. ರಕ್ಷಣೆ ನೀಡುವಂತೆ ಹಲ್ಲೆಗೊಳಗಾದವರು ಮನವಿ ಮಾಡಿದರು.
ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ, ಮಾದಿಗ ಮುಖಂಡ ಬಿ.ರಾಜಪ್ಪ ಜೆಜೆ.ಹಟ್ಟಿ, ತಿಮ್ಮಪ್ಪಯ್ಯನಹಳ್ಳಿಯ ಮಂಜು, ನ್ಯಾಯವಾದಿ ಸುರೇಶ್
ಹೋರಾಟಗಾರ ವೆಂಕಟೇಶ್ ಇವರುಗಳು ಧರಣಿಯಲ್ಲಿ ಭಾಗವಹಿಸಿದ್ದರು.










