ಚಳ್ಳಕೆರೆ | ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯ : ಸೊಸೆಯನ್ನು ಕೊಂದ ಮಾವ…!

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಜುಲೈ.17 : ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮಾವನಿಂದಲೇ ಸೊಸೆಯ  ಹತ್ಯೆಯಾಗಿರುವ ಘಟನೆ ತಾಲ್ಲೂಕಿನ ಹಾಲುಗೊಂಡನಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.  ಈರಮ್ಮ(45) ಹತ್ಯೆಯಾದ ಮಹಿಳೆ.

ಘಟನೆ ಹಿನ್ನೆಲೆ : ಹಾಲಗೊಂಡನಹಳ್ಳಿ ಸಮೀಪದ ಕರೀಕಲ್ಲು ಗೊಲ್ಲರಹಟ್ಟಿಯಲ್ಲಿ ಈರಮ್ಮ ವಾಸವಾಗಿದ್ದರು.  ಪತಿ ಗೋವಿಂದಪ್ಪ ಎಂಬುವವರು ಎಂಟು ವರ್ಷಗಳ ಹಿಂದೆಯೇ ಸಾವನ್ನಪ್ಪಿರುತ್ತಾರೆ. ಆದ್ದರಿಂದ ತನ್ನ ಪತಿಯ ಜಮೀನಿಗಾಗಿ ಈರಮ್ಮ ಅವರ ಪತಿಯ ಅಣ್ಣ ಚಂದ್ರಪ್ಪನ ನಡುವೆ ಕಲಹವಿತ್ತು. ಈ ವಿಚಾರವಾಗಿ ಆಸ್ತಿ ವಿವಾದದ ಪ್ರಕರಣ ಕೋರ್ಟ್ ನಲ್ಲಿತ್ತು. ಇದರ ತೀರ್ಪು ಗುರುವಾರ ಪ್ರಕಟವಾಗುವುದಿತ್ತು.

ಇದರ ನಡುವೆ ಇಂದು ಬೆಳಿಗ್ಗೆ ಚಂದ್ರಪ್ಪ ಮತ್ತು ಮಗ ಗಂಗಾಧರ್ ಸೂರನಹಳ್ಳಿಯಿಂದ ಬಂದು ಈರಮ್ಮನ್ನನ್ನು ಹೊರಗೆ ಕರೆದು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಹಲ್ಲೆಯನ್ನು ತಡೆಯಲು ಬಂದ ಈರಮ್ಮನವರ ತಾಯಿ ಮತ್ತು ಸಹೋದರಿ ಮಮತ ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈರಮ್ಮ ಸಾವನ್ನಪ್ಪಿದ್ದು, ಗಾಯಗೊಂಡ ಇಬ್ಬರನ್ನೂ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈರಮ್ಮನನ್ನು ಹತ್ಯೆ ಮಾಡಿದ ನಂತರ ಮಚ್ಚು ಹಿಡಿದುಕೊಂಡು ಓಡಾಡುತ್ತಿದ್ದ ಚಂದ್ರಪ್ಪನನ್ನು ಊರಿನ ಜನರು ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ವಿಷಯ ತಿಳಿಸಿ ಚಂದ್ರಪ್ಪ ಹಾಗೂ ಮಗ ಗಂಗಾಧರನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪರುಶುರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಎಎಸ್ಪಿ ಜೆ.ಕುಮಾರಸ್ವಾಮಿ, ಚಳ್ಳಕೆರೆ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಪಿಐ, ಆರ್.ಎಫ್. ದೇಸಾಯಿ,  ಪಿಎಸ್ ಐ ಬಸವರಾಜ್ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *