ಟ್ವಿಟ್ಟರ್ ನಲ್ಲಿ ಚಳ್ಳಕೆರೆ ವೃದ್ದೆಯ ಸಮಸ್ಯೆ : 24 ಗಂಟೆಯಲ್ಲಿ ಬಗೆಹರಿಸಿದ ಸಿಎಂ ಸಿದ್ದರಾಮಯ್ಯ

ಸುದ್ದಿಒನ್, ಚಿತ್ರದುರ್ಗ, (ಆ.27) : ಜಗತ್ತು ಬದಲಾಗಿ ಸುಮಾರು ವರ್ಷಗಳೇ ಕಳೆದಿವೆ. ಮೂಲ ಸೌಕರ್ಯಗಳನ್ನು ಎಲ್ಲರೂ ಪಡೆಯುತ್ತಿದ್ದಾರೆ. ಆದ್ರೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ಆ ವೃದ್ದೆ ಮನೆಯಲ್ಲಿ ವಿದ್ಯುತ್ ಅನ್ನೋದು ಮರಿಚಿಕೆಯಾಗಿತ್ತು. ಅದನ್ನು ಮನಗಂಡ ಸ್ತಳೀಯ ನಿವಾಸಿ ಮಹೇಂದ್ರ ಎನ್ನುವವರು ಅಜ್ಜಿಯ ಫೋಟೋ ತೆಗೆದು, ಟ್ವೀಟ್ ಮಾಡಿದ್ದರು.

“ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ  ದೊಣಮ್ಮ ಎಂಬುವ ಅನಾಥೆ, ನಾಗರಿಕತೆ ಬೆಳೆದು ಶತಮಾನಗಳು ಕಳೆದರೂ , ಕರೆಂಟ್ ವೈರ್ ಹಾಕಿಸಿಕೊಳ್ಳಲು ಹಣವಿಲ್ಲದೆ ಇಂದಿಗೂ ದೀಪದ  ಬೆಳಕಿನಲ್ಲಿ ಬದುಕುತ್ತಿರುವುದು ಈ ದೇಶದ ದುರಂತವೇ ಸರಿ” ಎಂದು ಸಿಎಂ ಹಾಗೂ ಡಿ ಸುಧಾಕರ್, ಶಾಸಕ ಟಿ ರಘುಮೂರ್ತಿ ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಲಾಗಿತ್ತು. ಅವರ ಟ್ವೀಟ್ ಗೆ ಸರ್ಕಾರ ಸ್ಪಂದಿಸಿದೆ. 24 ಗಂಟೆಯಲ್ಲೇ ಆ ವೃದ್ದೆ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೂಡ ಟ್ವೀಟ್ ಮಾಡಿದ್ದಾರೆ.

ಬದಲಾವಣೆ ತರಲು ನಾವೂ ಸಿದ್ಧ, ನೀವೂ ಜೊತೆಗಿರಿ ಎಂದಿದ್ದಾರೆ. “ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿದ್ದ ವಿಚಾರವನ್ನು ಸ್ಥಳೀಯರಾದ ಮಹೇಂದ್ರ ಅವರು ನಮ್ಮ ಕಚೇರಿಯ ಗಮನಕ್ಕೆ ತಂದರು. ತಕ್ಷಣ ಅವರ ಮನವಿಗೆ ಸ್ಪಂದಿಸಿ, ಕೇವಲ 24 ಗಂಟೆಗಳ ಒಳಗೆ ಆ ತಾಯಿಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಬದಲಾವಣೆ ಮೂಡಿಸಲು ನಾವು ಸಿದ್ಧರಿದ್ದೇವೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಸಹಕಾರವೂ ಇರಲಿ” ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!